ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಗೆಳೆಯನ ಹುಚ್ಚು ಪ್ರೀತಿಗಾಗಿ ತಾಳಿ ಕಟ್ಟಿದ ಗಂಡನನ್ನೇ ಕೊಲ್ಲಿಸಿದ ಕಿರಾತಕಿಯೊಬ್ಬಳು ಪೊಲೀಸರ ಅತಿಥಿ ಆಗಿದ್ದಾಳೆ. ಪತಿಯ ಜೀವ ತೆಗೆಯಲು ಆಕೆ ಮಾಡಿರುವ ಐಡಿಯಾಗಳು ಇನ್ನೂ ಬೆಚ್ಚಿ ಬೀಳಿಸುವಂತಿದೆ.
ಇನ್ಸ್ಟಾಗ್ರಾಮ್ನಲ್ಲಿ ಪರಿಚಯ
ಹರಿಯಾಣ ರಾಜ್ಯದ ಯಮುನಾನಗರದ ಮೀನಾಕ್ಷಿಗೆ 30 ವರ್ಷದ ನೀತು ಜೊತೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಈ ಮೀನಾಕ್ಷಿಗೆ ಮೊಬೈಲ್ ಮೇಲೆ ವಿಪರಿತ ವ್ಯಾಮೋಹ. ಹೀಗೆ ಒಮ್ಮೆ ಇನ್ಸ್ಟಾಗ್ರಾಮ್ನಲ್ಲಿ ಸ್ಕ್ರಾಲ್ ಮಾಡ್ತಿರುವಾಗ ಸೋನಿಪತ್ ಮೂಲದ ಸಾಹಿಲ್ ಎಂಬಾತನ ಪರಿಚಯ ಆಗುತ್ತದೆ. ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಿ ‘ನೀನಗೆ ನಾನು, ನೀನು ನನಗೆ’ ಅಂತಾ ಪ್ರೇಮದ ಅಮಲಿನಲ್ಲಿ ತೇಲಾಡಲು ಶುರುಮಾಡಿದ್ದರು. ಎಂದೆಂದಿಗೂ ಬಿಟ್ಟಿರಲಾಗದ ಪ್ರೀತಿ ನಮ್ಮದು ಅಂದುಕೊಂಡ ಮೀನಾಕ್ಷಿ, ತನ್ನ ಪತಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿಬಿಟ್ಟಿದ್ದಳು.
ಇನ್ಸ್ಟಾಗ್ರಾಮ್ ಜೋಡಿ ಹಕ್ಕಿಯ ಪ್ರೀತಿಯ ಬೇರು ಆಳವಾಗಿ ಚಿಗುರುತ್ತಿದ್ದಂತೆಯೇ ಇಬ್ಬರು ಒಟ್ಟಿಗೆ ಸಂಸಾರ ನಡೆಸಲು ನಿರ್ಧರಿಸಿದ್ದಾರೆ. ಅವರಿಗೆ ಅಡ್ಡಿಯಾಗಿದ್ದು, ಮೀನಾಕ್ಷಿ ಪತಿ ನೀತು. ಗಂಡನನ್ನು ಹೇಗಾದರೂ ಮಾಡಿ ಮುಗಿಸಿಬಿಟ್ಟರೆ ಸಾಹಿಲ್ನ ಜೊತೆ ಬದುಕಿನ ಕೊನೆಯ ಕ್ಷಣದವರೆಗೂ ಇರಬಹುದು ಅಂದುಕೊಂಡ ಮೀನಾಕ್ಷಿ ಗಂಡನಿಗೆ ಗೊತ್ತಿಲ್ಲದೇ ಮುಗಿಸಲು ಯೋಜನೆ ರೂಪಿಸುತ್ತಾಳೆ.
ಪ್ರಿಯಕರನಿಗೆ ಸಂಚು
ಯಾರಿಗೂ ಅನುಮಾನ ಬರದಂತೆ ಸಾಯಿಸುವುದು ಹೇಗೆ ಎಂಬ ಆಲೋಚನೆಯಲ್ಲಿದ್ದ ಮೀನಾಕ್ಷಿಗೆ ಸಹಾಯ ಆಗಿದ್ದು ಯೂಟ್ಯೂಬ್. ಯೂಟ್ಯೂಬ್ನಲ್ಲಿ ಹೇಗೆ ಸಾಯಿಸಬಹುದು? ನಂತರ ಪ್ರಕರಣವನ್ನು ಹೇಗೆ ಮುಚ್ಚಿ ಹಾಕಬಹುದು ಎಂದು ಹುಡುಕಾಡಿದ್ದಾಳೆ. ಕೊನೆಗೆ ಓವರ್ ಡೋಸ್ ಇಂಜೆಕ್ಷನ್ ನೀಡಿದರೆ ಮನುಷ್ಯರು ಸಾಯುತ್ತಾರೆ ಎಂದು ತಿಳಿದುಕೊಂಡಿದ್ದಾಳೆ. ಅಂತೆಯೇ ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿದ್ದಾಳೆ.
ಯೋಜನೆಯಂತೆ ಜನವರಿ ಒಂದರಂದು ಪ್ರಿಯಕರನನ್ನು ಮೀನಾಕ್ಷಿ ಕರೆಸಿಕೊಂಡಿದ್ದಾಳೆ. ಅಲ್ಲಿ ಪತಿಗೆ ಈತ ತನ್ನ ದೂರದ ಸಹೋದರ ಸಂಬಂಧಿ ಎಂದು ಪರಿಚಯಿಸಿದ್ದಾಳೆ. ನಂತರ ಲೋ ಬಿಪಿಗೆ ಇವರು ಇಂಜೆಕ್ಷನ್ ಕೊಡುತ್ತಾರೆ. ನೀವು ಅವರ ಜೊತೆ ಹೋಗಿ ತೆಗೆದುಕೊಂಡು ಬನ್ನಿ ಎಂದು ಪ್ರಿಯಕರನ ಜೊತೆ ಪತಿಯನ್ನು ಕಳುಹಿಸಿಕೊಟ್ಟಿದ್ದಾಳೆ. ಇದೇ ವೇಳೆ ಪ್ರಿಯಕರ ಸಾಹಿಲ್, ಕಾರ್ಖೋಡದ ಗೆಳೆಯ ಅಮನ್ನನ್ನು ಬಳಸಿಕೊಂಡು ಕೊಲೆ ಮಾಡಲು ನಿರ್ಧರಿಸಿದ್ದಾರೆ. ಇವರುಗಳು ಓವರ್ ಡೋಸ್ ಇಂಜೆಕ್ಷನ್ ನೀಡಿ ಸಾಯಿಸಿದ್ದರು.
ಪರಾರಿ ಆಗಲು ರೂಪಿಸಿದ್ದ ಪ್ಲಾನ್ ಹೇಗಿತ್ತು..!?
ಇಂಜೆಕ್ಷನ್ ನೀಡಿದ ಬಳಿಕ ಮೂವರು ಪರಾರಿ ಆಗಲು ಪ್ಲಾನ್ ಮಾಡಿದ್ದರು. ಆದರೆ ಅಷ್ಟು ಸುಲಭವಾಗಿ ಎಸ್ಕೇಪ್ ಆಗಲು ಸಾಧ್ಯವಾಗಲಿಲ್ಲ. ಯಾಕಂದರೆ ಜನವರಿ 4 ರಂದು ಹೊಲದಲ್ಲಿ ನೀತು ಅವರ ಮೃತದೇಹ ಸ್ಥಳೀಯರಿಗೆ ಪತ್ತೆಯಾಗಿದೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆಯನ್ನು ತೀವ್ರಗೊಳಿಸಿ ಮೃತ ವ್ಯಕ್ತಿ ಯಾರು ಅನ್ನೋದನ್ನು ಗುರುತು ಪತ್ತೆ ಮಾಡಿಕೊಂಡು ರಹಸ್ಯ ಭೇದಿಸಲು ಮುಂದಾಗಿದ್ದಾರೆ.
ಈ ವೇಳೆ ಮೀನಾಕ್ಷಿಯ ನಂಬರ್ ಪಡೆದು ಟ್ರ್ಯಾಕ್ ಮಾಡಿದ್ದಾರೆ. ಆಗ ಪೊಲೀಸರಿಗೆ ಒಂದೊಂದೇ ಸತ್ಯಗಳು ಗೊತ್ತಾಗಿದೆ. ಕೂಡಲೇ ಮೀನಾಕ್ಷಿಯನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿಸಿರುವ ಬಗ್ಗೆ ಬಾಯಿಬಿಟ್ಟಿದ್ದಾಳೆ. ಪ್ರೀತಿಸಿದ ಹುಡುಗನನ್ನು ಪಡೆಯಲು ಲೋ ಬಿಪಿಗೆ ಓವರ್ ಡೋಸ್ ಇಂಜೆಕ್ಷನ್ ನೀಡಿ ಸಾಯಿಸಿರೋದಾಗಿ ಬಾಯಿಬಿಟ್ಟಿದ್ದಾಳೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಹಿಮಾದ್ರಿ ಕೌಶಿಕ್, ಹೊಲದಲ್ಲಿ 30 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಸದ್ಯ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


























