ಪುತ್ತೂರು: ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳವನ್ನು ಮೈಸೂರು ಭಾಗದಿಂದ ಕಡಿಮೆ ಅವಧಿಯಲ್ಲಿ ಸಂಪರ್ಕಿಸುವ ಸವಣೂರು -ಪೆರುವಾಜೆ-ಬೆಳ್ಳಾರೆ ರಸ್ತೆಯಲ್ಲಿನ ಕುಂಜಾಡಿ ಬಳಿ 2.5 ಕೋ.ರೂ.ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಆರಂಭಗೊoಡಿದೆ.
ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆ ಇದಾಗಿದ್ದು ಹಳೆ ಸೇತುವೆಯನ್ನು ಕೆಡವಿ ಸುಸಜ್ಜಿತ ಹೊಸ ಸೇತುವೆ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ.
ಧರ್ಮಸ್ಥಳಕ್ಕೆ ತೆರಳಲು ಅನುಕೂಲ
ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಿಸಿದ ಬಳಿಕ ಧರ್ಮಸ್ಥಳಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಬೆಳ್ಳಾರೆ-ಸವಣೂರು ಸಂಪರ್ಕ ರಸ್ತೆ ಸಂಚಾರಕ್ಕೆ ಹೆಚ್ಚು ಅನುಕೂಲಕರ. ಮೈಸೂರು, ಮಡಿಕೇರಿ, ಕಾಸರಗೋಡು, ಸುಳ್ಯ ಭಾಗದವರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಇಲ್ಲಿ ವಾಹನ ಓಡಾಟ ಹೆಚ್ಚಾಗಿದೆ. ಜತೆಗೆ ಪೆರುವಾಜೆ, ಸವಣೂರು, ಬೆಳಂದೂರಿನಲ್ಲಿ ಪ್ರಥಮ ದರ್ಜೆ ಕಾಲೇಜು, ಗ್ರಾ.ಪಂ. ಕಟ್ಟಡ, ಸಂತೆ ವ್ಯವಹಾರ, ಬ್ಯಾಂಕ್ ಮೊದಲಾದ ಕಚೇರಿಗಳಿಗೆ ತೆರಳಬೇಕಿದ್ದರೂ ಈ ರಸ್ತೆಯೇ ಅನುಕೂಲಕರವಾಗಿದೆ.
2.5 ಕೋ.ರೂ.
ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆ 50-54 ರ 7.5 ಕೋ.ಅನುದಾನದಲ್ಲಿ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದಿನ ರಸ್ತೆಯು ತಿರುವುನಿಂದ ಕೂಡಿತ್ತು. ಹಾಗಾಗಿ ಹಳೆ ಸೇತುವೆ ಕೆಡವಿ ಅದೇ ಜಾಗದಲ್ಲಿ ಎತ್ತರದಲ್ಲಿ ಹೊಸ ಸೇತುವೆ ನಿರ್ಮಾಣವಾಗಲಿದೆ. ಬೊಬ್ಬೆರಕಾಡು ಚಡಾವು ಬಳಿಯಿಂದ ಕುಂಜಾಡಿ ತನಕ ರಸ್ತೆಯನ್ನು ಸೇತುವೆಗೆ ಸರಿ ಸಮವಾಗಿ ಎತ್ತರಿಸಲಾಗುತ್ತದೆ. ಸೇತುವೆಯು 10 ಮೀ. ಎತ್ತರ ಹಾಗೂ 12 ಮೀ.ಅಗಲ ಇರಲಿದೆ.

ಅಭಿವೃದ್ಧಿ ಕಾರ್ಯ
ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗ ಮತ್ತು ಸುಳ್ಯ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆ ಇದಾಗಿದೆ. 2021 ಮಾರ್ಚ್ನಲ್ಲಿ ಈ ಎರಡೂ ಉಪವಿಭಾಗ ವ್ಯಾಪ್ತಿಯಲ್ಲಿ 7 ಕಿ.ಮೀ. ರಸ್ತೆ ಒಟ್ಟು 7.5 ಕೋ.ರೂ. ವೆಚ್ಚದಲ್ಲಿ 5.5 ಮೀ.ಅಗಲದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿತ್ತು. ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ-ಕಾಪುಕಾಡು ತನಕ 3.5 ರೂ.ವೆಚ್ಚದಲ್ಲಿ ಹಾಗೂ ಪುತ್ತೂರು ಉಪವಿಭಾಗಕ್ಕೆ ಸೇರಿರುವ ಕನ್ನಡಕುಮೇರಿನಿಂದ ಕಾಪುಕಾಡು ತನಕದ ವ್ತಾಪ್ತಿಯಲ್ಲಿ 4 ಕೋ.ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ-ಕಾಪುಕಾಡು ತನಕ 3.5 ರೂ.ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಪುತ್ತೂರು ಉಪವಿಭಾಗಕ್ಕೆ ಸೇರಿದ ಕನ್ನಡಕುಮೇರಿನಿಂದ ಬೊಬ್ಬರಕಾಡು ಚಡಾವಿನ ತನಕ ಡಾಮರು ಆಗಿದೆ. ಅಲ್ಲಿಂದ ಮುಕ್ಕೂರು-ಕಾಪುಕಾಡು ತನಕ ರಸ್ತೆಯ ಇಕ್ಕೆಲೆ ಅಗೆದು ಮೂರು ವರ್ಷ ಸಂದಿದ್ದು ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖ ಸಂಪರ್ಕ ರಸ್ತೆ
ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಾಣಗೊಂಡ ಬಳಿಕ ಯಾತ್ರಾರ್ಥಿಗಳಿಗೆ ಕಡಿಮೆ ದೂರ, ಅವಽಯಲ್ಲಿ ಬೆಳ್ಳಾರೆ-ಪೆರುವಾಜೆ-ಸವಣೂರು ಸಂಪರ್ಕ ರಸ್ತೆ ಮೂಲಕ ಧರ್ಮಸ್ಥಳಕ್ಕೆ ತೆರಳಲು ಅನುಕೂಲಕರವೆನಿಸಿದೆ. ಮೈಸೂರು, ಮಡಿಕೇರಿ, ಕಾಸರಗೋಡು, ಸುಳ್ಯ ಸೇರಿದಂತೆ ತಾಲೂಕು, ಹೊರ ಜಿಲ್ಲೆಯ ಜನರು ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ತೆರಳಲು ಈ ರಸ್ತೆಯನ್ನು ಬಳಸುತ್ತಾರೆ. ಸೇತುವೆ ನಿರ್ಮಾಣಕ್ಕೆ ಮೊದಲು ಯಾತ್ರಾರ್ಥಿಗಳು ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಸುತ್ತು ಬಳಸಿ ಧರ್ಮಸ್ಥಳಕ್ಕೆ ತೆರಳಬೇಕಿತ್ತು. ಸೇತುವೆಯಾದ ಅನಂತರ ಇಲ್ಲಿ ವಾಹನ ಓಡಾಟ ಹೆಚ್ಚಾಗಿದೆ. ಜತೆಗೆ ಪೆರುವಾಜೆ, ಸವಣೂರು, ಬೆಳಂದೂರಿನಲ್ಲಿ ಪ್ರಥಮ ದರ್ಜೆ ಕಾಲೇಜು, ಕಡಬ ತಾಲೂಕು ಕೇಂದ್ರ, ಆಲಂಕಾರು, ನೆಲ್ಯಾಡಿ ಮೊದಲಾದೆಡೆ ತೆರಳಲು ಈ ರಸ್ತೆಯೇ ಉಪಯುಕ್ತವೆನಿಸಿದೆ. ಬೆಳ್ಳಾರೆ-ಸವಣೂರು ಮೂಲಕ ಸುಳ್ಯ, ಪುತ್ತೂರು, ಕಾಣಿಯೂರು, ಕಡಬಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಎರಡು ಗಂಟೆಗೊಮ್ಮೆ ಇಲ್ಲಿ ಬಸ್ ಸಂಚರಿಸುತ್ತಿವೆ.
ಸವಣೂರು-ಪೆರುವಾಜೆ-ಬೆಳ್ಳಾರೆ ರಸ್ತೆಯ ಕುಂಜಾಡಿ ಬಳಿ ಹೊಸ ಸೇತುವೆ ಹಾಗೂ ಬೊಬ್ಬೆರಕಾಡು ಚಡಾವು ಬಳಿಯಿಂದ ಕುಂಜಾಡಿ ತನಕ ರಸ್ತೆಯನ್ನು ಸೇತುವೆಗೆ ಸರಿ ಸಮವಾಗಿ ಎತ್ತರಿಸಲಾಗುತ್ತಿದೆ. 2.5 ಕೋ.ರೂ.ವೆಚ್ಚದ ಯೋಜನೆ ಇದಾಗಿದ್ದು ಇನ್ನು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಎಲ್‌ಸಿ ಸ್ವಿಕೇರ
ಜೆಇ, ಲೋಕೋಪಯೋಗಿ ಇಲಾಖೆ
ಪುತ್ತೂರು
ಸುರಕ್ಷತೆಗೆ ಪೂರಕ
ಸೇತುವೆ ನಿರ್ಮಾಣಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಅನುದಾನ ಒದಗಿಸುವಲ್ಲಿ ಶ್ರಮಿಸಿದ್ದಾರೆ. ರಸ್ತೆಯನ್ನು ನೇರವಾಗಿ, ಸೇತುವೆ ಎತ್ತರಿಸಬೇಕು ಎನ್ನುವ ಬಹುಕಾಲದ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಇದರಿಂದ ವಾಹನ ಸವಾರರ ಸುರಕ್ಷತೆಗೆ ಅನುಕೂಲವಾಗಲಿದೆ.
ರಾಕೇಶ್ ರೈ ಕೆಡೆಂಜಿ
ಮಾಜಿ ಸದಸ್ಯ
ಅಕ್ರಮ-ಸಕ್ರಮ ಸಮಿತಿ
ಸುಳ್ಯ ವಿಧಾನಸಭಾ ಕ್ಷೇತ್ರ
ಇನ್ನಷ್ಟು ಅನುದಾನ
ಪಾಲ್ತಾಡಿ ಮತ್ತು ಪೆರುವಾಜೆ ಗ್ರಾಮದ ನಾನಾ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಾಗಿದೆ. ರಸ್ತೆ, ಸೇತುವೆ ನಿರ್ಮಾಣದ ಹೆಚ್ಚಿನ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ಕುಂಜಾಡಿ ಬಳಿ ಸುಸಜ್ಜಿತ ಸೇತುವೆ ನಿರ್ಮಾಣವಾಗುತ್ತಿದ್ದು ಇದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಪರ್ಕಿಸುವ ಭಕ್ತರಿಗೆ ಸೇರಿದಂತೆ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ.
ನಳಿನ್ ಕುಮಾರ್ ಕಟೀಲು
ಸಂಸದ
ದ.ಕ.ಲೋಕಸಭಾ ಕ್ಷೇತ್ರ


























