ವೇಣೂರು : ಕುಕ್ಕೇಡಿ ಗ್ರಾ.ಪಂಚಾಯತ್ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿ ಸುಡುಮದ್ದು ತಯಾರಿ ಘಟಕದಲ್ಲಿ ಭಾನುವಾರ ಸಂಜೆ ಸ್ಪೋಟ ಸಂಭವಿಸಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಕ ಸೈಯದ್ ಬಶೀರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇಲೆ ಮಾಲಕ ಬಶೀರ್ ಮೇಲೆ ಎಫ್ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ಜಾಗ ಹಾಗೂ ಪಟಾಕಿ ತಯಾರಿಕಾ ಘಟಕದ ಮಾಲಕ ಸೈಯದ್ ಬಶೀರ್ ಘಟನೆ ಬಳಿಕ ವೇಣೂರಿನಿಂದ ಪರಾರಿಯಾಗಿದ್ದಾಗ ಖಚಿತ ಮಾಹಿತಿ ಮೇರೆಗೆ ಸುಳ್ಯದಲ್ಲಿ ವಶಕ್ಕೆ ಪಡೆದುಕೊಂಡು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಭಾನುವಾರ ಈ ದುರಂತ ನಡೆದಿದ್ದು, ಕೇರಳದವರಾದ ಸ್ವಾಮಿ (55), ವರ್ಗೀಸ್ (68), ಹಾಸದ ಅರಸೀಕೆರೆ ಮೂಲದ ಚೇತನ್ (25) ಎಂಬ ಮೂವರು ಮೃತಪಟ್ಟಿದ್ದು, ಘಟನೆ ನಡೆದ ಬಳಿಕ ಉಳಿದ ಕಾರ್ಮಿಕರು, ಮಾಲೀಕ ಪರಾರಿಯಾಗಿದ್ದರು.
ಶಾಂತಿಯವರು ನೀಡಿದ ದೂರಿನಲ್ಲೇನಿದೆ.!?
ಬಶೀರ್ ಎಂಬಾತನು ತನ್ನ ತೋಟದ ಶೆಡ್‌ನಲ್ಲಿ, ಕೇರಳ ಮೂಲದ 3 ಜನ ಹಾಗೂ ಹಾಸನ ಮೂಲದ 6 ಜನರನ್ನು ಸೇರಿಸಿಕೊಂಡು, ಸ್ಪೋಟಕ ವಸ್ತುಗಳ ನುರಿತ ಕಾಮಗಾರಿಗಳನ್ನು ತಯಾರಿಸುವ ವ್ಯಕ್ತಿಗಳನ್ನು ನಿಯೋಜಿಸದೆ ಹಾಗೂ ಸ್ಪೋಟಕ ವಸ್ತುಗಳು ಸಿಡಿದರೆ ಜೀವಹಾನಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗುತ್ತದೆ ಎಂದು ತಿಳಿದಿದ್ದರೂ, ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ ನಿರ್ಲಕ್ಷತನದಿಂದ ಕಾಮಗಾರಿ ನಡೆಸುವಾಗ, ಸ್ಪೋಟಕ ವಸ್ತುವಿನಲ್ಲಿ ಬೆಂಕಿ ಕಾಣಿಸಿ ಸ್ಪೋಟಗೊಂಡ ಪರಿಣಾಮ, ಕೆಲಸ ಮಾಡುತ್ತಿದ್ದ ಮೂವರು ಮೃತಪಟ್ಟಿದ್ದು, ಇದರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.


























