ಪುತ್ತೂರು : ಕೋವಿಡ್-19 ನಿವಾರಣೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಸಹಕಾರಿ ನೌಕರರುಗಳನ್ನು ಕರೋನ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ, ಸಂಘಗಳಲ್ಲಿ ದುಡಿಯುವ ಎಲ್ಲಾ ನೌಕರವೃಂದ ದವರಿಗೆ ಪ್ರಥಮ ಪ್ರಾಶಸ್ಯನೀಡಿ ವ್ಯಾಕ್ಸಿನೇಷನ್ ನೀಡುವಂತೆ ಹಾಗೂ ವಿಮಾ ಭದ್ರತೆ ಒದಗಿಸಿಕೊಡುವಂತೆ ಸಮಸ್ತ ಸಹಕಾರಿಗಳ ಪರವಾಗಿ ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಬಿ. ಪ್ರಸಾದ್ ಕೌಶಲ್ ಶೆಟ್ಟಿ ರವರು ಸಹಕಾರಿ ಸಚಿವರಾದ ಎಸ್. ಟಿ ಸೋಮಶೇಖರ್ ರವರಿಗೆ ಮನವಿ ಮಾಡಿದರು.
ರಾಜ್ಯದ ಕೋವಿಡ್-19 ರೋಗವು ವಿಪರೀತವಾಗಿ ಹರಡಿದ್ದು, ಅದರ 2ನೇಹಾಗೂ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ರಾಜ್ಯದ ಎಲ್ಲಾ ಸಹಕಾರಿ ಸಂಘ ಸಂಸ್ಥೆಗಳು ಕಟಿಬದ್ಧರಾಗಿ ಶ್ರಮಿಸುವ ಮೂಲಕ ಸರಕಾರದ ಆದೇಶಗಳನ್ನು ಸಂಘ ಸಂಸ್ಥೆಗಳು ಪಾಲಿಸುತ್ತಿವೆ. ಅದರಂತೆ ಸಂಘದ ಆಡಳಿತ
ಮಂಡಳಿ, ಅಧ್ಯಕ್ಷರು/ಉಪಾಧ್ಯಕ್ಷರು, ಅಧಿಕಾರಿಗಳು, ಸಿಬ್ಬಂದಿಗಳು ಎಲ್ಲರೂ ಒಟ್ಟಿಗೆ ಸೇರಿ ಕರೋನ ಹಂತಕ ರೋಗವನ್ನು ದೂರ ಮಾಡಲು ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ಜನಸಾಮಾನ್ಯರುಗಳಿಗೆ ಸೇವೆ ನೀಡುತ್ತಿದ್ದಾರೆ ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೀಡಾದವರಿಗೆ ಸಹಕಾರಿಗಳಿಗೆ ಮತ್ತು ಜನಸಾಮಾನ್ಯರಿಗೆ ಸಹಾಯ ಮಾಡುವ ದೃಷ್ಟಿಯಿಂದ ಬ್ಯಾಂಕಿಂಗ್, ಸಹಕಾರಿ ಕ್ಷೇತ್ರದ ಮೂಲಕ, ಸಾವಿರಾರು ಪಡಿತರಗಳಿಗೆ, ಪಡಿತರ ಆಹಾರ ಧಾನ್ಯಗಳ ವಿತರಣೆ ಮಾಡುವ ಮೂಲಕ ಸಾರ್ವಜನಿಕರನ್ನು ನೇರವಾಗಿ ಸಂಪರ್ಕಿಸುತ್ತಿದ್ದಾರೆ.
ಇಂತಹ ಸಿಬ್ಬಂದಿ ಕುಟುಂಬಸ್ಥರಿಗೆ ಮತ್ತು ಅವಲಂಬಿತರಿಗೆ ಯಾವುದೇ ಜೀವನ ಭದ್ರತೆಗಳು ಇಲ್ಲದಿರುವುದನ್ನು
ಮನಗಾಣಬೇಕಾಗಿದ್ದು ಇದೆಲ್ಲವನ್ನು ಪರಿಗಣಿಸಿ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಪ್ರಥಮ ಪ್ರಾಶಸ್ಯ ನೀಡಬೇಕು ಹಾಗೂ ಇಂತಹ ಸಿಬ್ಬಂದಿಗಳು ಅಥವಾ ನೌಕರರುಗಳಿಗೆ ವಿಮಾ ಭದ್ರತೆಯನ್ನು ಸರಕಾರ/ಸಹಕಾರ ಇಲಾಖೆ ಮಾಡಿಕೊಡಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿಗಳ ಪರವಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಪ್ರತಿಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ
ಕೋಟ ಶ್ರೀನಿವಾಸ ಪೂಜಾರಿ, ಶಾಸಕರು ಹಾಗೂ ಕ.ರಾ.ಸ.ಮಂ.ನಿ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ರವರಿಗೆ ಹಾಗೂ ದ.ಕ. ಜಿಲ್ಲೆ ಜಿಲ್ಲಾಧಿಕಾರಿಗಳಾದ ರಾಜೇಂದ್ರ ಕೆ. ವಿ. ರವಾನಿಸಲಾಗಿದೆ.