ವಾಷಿಂಗ್ಟನ್ : ಹೈದರಾಬಾದ್ ಮೂಲದ ವಿದ್ಯಾರ್ಥಿಯೋರ್ವ ಅಮೆರಿಕದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕಳೆದ ಒಂದು ತಿಂಗಳಿನಿಂದ ಭಾರತ ಮೂಲದ ನಾಲ್ವರು ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಹೈದರಾಬಾದ್ ಮೂಲದ ಶ್ರೇಯಸ್ ರೆಡ್ಡಿ ಬೇನಿಗೇರಿ (19) ಮೃತ ವಿದ್ಯಾರ್ಥಿ.
ಅಮೆರಿಕದ ಪಾಸ್‌ಪೋರ್ಟ್ ಹೊಂದಿರುವ ಶ್ರೇಯಸ್ ಓಹಿಯೋದ ಲಿಂಡ್‌ನರ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರ ಪೋಷಕರು ಹೈದರಾಬಾದ್‌ನಲ್ಲಿದ್ದು ಮಗ ಸಾವಿನಿಂದ ದುಃಖತಪ್ತರಾಗಿದ್ದಾರೆ ಎಂದು ಹೇಳಲಾಗಿದೆ.
ನ್ಯೂಯಾರ್ಕ್‌ನಲ್ಲಿನ ಭಾರತದ ರಾಯಭಾರ ಕಚೇರಿ, ಶ್ರೇಯಸ್ ಸಾವಿನ ಹಿಂದಿನ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ. ವಿದ್ಯಾರ್ಥಿ ಶ್ರೇಯಸ್ನ ದುರದೃಷ್ಟಕರ ಸಾವಿನಿಂದ ದುಃಖವಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಕುಟುಂಬದ ಜೊತೆ ಕಾನ್ಸುಲೇಟ್ ಸಂಪರ್ಕದಲ್ಲಿದ್ದು, ಎಲ್ಲಾ ನೆರವು ನೀಡಲಾಗುವುದು ಎಂದು ಎಕ್ಸ್ ಅಕೌಂಟ್ನಲ್ಲಿ ತಿಳಿಸಿದೆ.


























