ಲಕ್ನೋ : ಮದುವೆ ಅನ್ನೋದು ಒಂದು ಪವಿತ್ರ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿದೆ. ವಿಚ್ಛೇದನ, ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ಅರ್ಥಹೀನವಾಗುತ್ತಿದೆ. ಲವ್ ಮಾಡಿ ಅರ್ಧದಲ್ಲೇ ಕೈ ಬಿಡುವುದು, ನಿಶ್ಚಿತಾರ್ಥ ಮಾಡಿಕೊಂಡು ಅರ್ಧಕ್ಕೆ ಕೈ ಬಿಡುವುದು, ಮದುವೆ ಮನೆಯಲ್ಲೇ ಈ ಹುಡುಗ ನನಗೆ ಬೇಡ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ.
ಹಾಗೆಯೇ ಮದುವೆಗೆ ಸಿದ್ಧವಾಗಲು ಬ್ಯೂಟಿಪಾರ್ಲರ್ಗೆ ಹೋದ ವಧು ಅಲ್ಲಿಂದಲೇ ಪ್ರಿಯಕರನೊಂದಿಗೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಚೌಬೆಪುರ್ ಗ್ರಾಮದಲ್ಲಿ ನಡೆದಿದೆ.
ಮದುವೆಯ ದಿನ ಸುಂದರವಾಗಿ ಕಾಣಬೇಕೆಂದು ಬ್ಯೂಟಿಪಾರ್ಲರ್ಗೆ ಹೋಗಿದಾಕೆ ಪ್ರೀತಿಸಿದವನ ಜೊತೆ ಪರಾರಿಯಾಗಿದ್ದಾಳೆ.
ಮಹಿಳೆಯೂ ಹಲವು ಬಾರಿ ಪೋಷಕರಿಗೆ ಆಕೆಯ ಪ್ರೀತಿಯ ವಿಚಾರದ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಅದಕ್ಕೆ ಆಕೆಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಮೊದಲು ಮದುವೆಗೆ ಒಪ್ಪಿಕೊಂಡ ಮಹಿಳೆ ಬ್ಯೂಟಿಪಾರ್ಲರ್ಗೆ ಹೋಗಿ ಬರುತ್ತೇನೆ ಅಂತಾ ಪೋಷಕರಿಗೆ ಹೇಳಿಕೊಂಡು, ಅಲ್ಲಿಂದ ಬೇರೊಂದು ಯುವಕನ ಜೊತೆ ಪರಾರಿಯಾಗಿ ಬಿಟ್ಟಿದ್ದಾಳೆ. ಬಳಿಕ ತುಂಬಾ ಸಮಯವಾದರೂ ಮಗಳು ಬರದಿದ್ದಕ್ಕೆ ಅನುಮಾನಗೊಂಡ ಪೋಷಕರು ವಿಚಾರಿಸಿದ್ದಾರೆ. ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























