ಬೆಂಗಳೂರು: ರಾಜ್ಯದ ಹಳ್ಳಿಗಳಿಗೆ ಕೊರೊನಾ ಸೋಂಕು ಹರಡುತ್ತಿರುವುದು ಮತ್ತು ಸೋಂಕಿನಿಂದ ಸಾವು ನೋವುಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸದ್ಯ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಮತ್ತೆ 14 ದಿನಗಳ ಮುಂದುವರೆಸಲಾಗುತ್ತಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಮೇ 24 ರಿಂದ ಜೂನ್ 7 ನೇ ತಾರೀಕಿನವರೆಗೆ ಈ ಲಾಕ್ಡೌನ್ ಜಾರಿಯಲ್ಲಿರಲಿದ್ದು ಈ ಹಿಂದಿನ ಮಾರ್ಗಸೂಚಿಯೇ ಈ ಅವಧಿಯಲ್ಲಿ ಮುಂದುವರೆಯುತ್ತದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿರುತ್ತದೆ ಎಂದು ಸಿಎಂ ಹೇಳಿದ್ದಾರೆ.
ಜನರು ಮಾಸ್ಕ್ ಧರಿಸುವ ಮೂಲಕ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಹಾಗೂ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಇದೇ ವೇಳೆ ಸಿಎಂ ಬಿಎಸ್ವೈ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜನರು ಅನಗತ್ಯ ಸಂಚಾರ ಮಾಡಬಾರದು.. ನಿಯಮಗಳನ್ನು ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಸಿಎಂ ಎಚ್ಚರಿಕೆ ನೀಡಿದ್ದಾರೆ.