ತಿರುವನಂತಪುರಂ : ಹಸಿವು ತಾಳಲಾರದೇ ಯುವಕನೋರ್ವ ಬೆಕ್ಕಿನ ಮಾಂಸ ಸೇವಿಸಿದ ವಿಚಿತ್ರ ಘಟನೆ ಕೇರಳ ಜಿಲ್ಲೆಯ ಕುಟ್ಟಿಪುರಂನಲ್ಲಿ ನಡೆದಿದೆ.
ಕುಟ್ಟಿಪುರಂನ ಜನನಿಬಿಡ ಪ್ರದೇಶದಲ್ಲಿರೋ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೆಕ್ಕಿನ ಮಾಂಸ ಸೇವಿಸಿದ ಯುವಕ ಅಸ್ಸಾಂನ ದುಬ್ರಿ ಜಿಲ್ಲೆಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ದಿನಗಳಿಂದ ಹಸಿವಿನಿಂದ ಕಂಗೆಟ್ಟಿದ್ದ ಯುವಕನಿಗೆ ತಿನ್ನಲು ಏನೂ ಸಿಗದ ಕಾರಣ ಬೆಕ್ಕಿನ ಹಸಿ ಮಾಂಸವನ್ನೇ ತಿಂದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಇಲ್ಲಿನ ಸ್ಥಳೀಯ ರೈಲು ನಿಲ್ದಾಣದಲ್ಲಿ ಯುವಕನೋರ್ವ ಬೆಕ್ಕಿನ ಮಾಂಸ ಸೇವಿಸುತ್ತಿದ್ದಾನೆ ಎಂದು ನಮಗೆ ಮಾಹಿತಿ ಬಂತು. ಕೂಡಲೇ ಅಲ್ಲಿಗೆ ಧಾವಿಸಿದೆವು. ಆತನ ಬಗ್ಗೆ ವಿಚಾರಣೆ ನಡೆಸಿದೆವು. ಆತ ಕಳೆದ 5 ದಿನಗಳಿಂದ ಏನನ್ನೂ ತಿಂದಿಲ್ಲ ಎಂದು ತಿಳಿಸಿದ ಎಂದು ಹೇಳಿದ್ದಾರೆ.
ಆತ ಅಸ್ಸಾಂನ ಕಾಲೇಜು ವಿದ್ಯಾರ್ಥಿ, ಕುಟುಂಬಕ್ಕೆ ಮಾಹಿತಿ ನೀಡದೆ ಆತ ಡಿಸೆಂಬರ್ನಲ್ಲಿ ರೈಲಿನಲ್ಲಿ ಕೇರಳಕ್ಕೆ ತಲುಪಿದ್ದ ಎಂಬುದು ಆತನ ಹೇಳಿಕೆಯಿಂದ ತಿಳಿದು ಬಂದಿದೆ.
ಆತ ಚೆನ್ನೈಯಲ್ಲಿ ಕೆಲಸ ಮಾಡುತ್ತಿರುವ ತನ್ನ ಸಹೋದರನ ಫೋನ್ ನಂಬರ್ ನೀಡಿದ್ದು, ನಾವು ಆತನ ಸಹೋದರನನ್ನು ಸಂಪರ್ಕಿಸಿದೆವು. ಇದರಿಂದ ಆತ ನೀಡಿದ ಮಾಹಿತಿ ಸತ್ಯ ಎಂಬುಂದು ದೃಢಪಟ್ಟಿತು. ಆತನಿಗೆ ಯಾವುದೇ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಇಲ್ಲ. ಆತನ ಕುಟುಂಬಿಕರು ಇಲ್ಲಿಗೆ ಆಗಮಿಸಿದಾಗ ಆವರೊಂದಿಗೆ ಕಳುಹಿಸಿ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಯುವಕನ್ನು ತ್ರಿಶೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


























