ಪುತ್ತೂರು : ಅರುಣ್ ಕುಮಾರ್ ಪುತ್ತಿಲರಿಗೆ ಪಕ್ಷದ ಹುದ್ದೆ, ಜವಾಬ್ದಾರಿ ನೀಡುವ ನಿರ್ಧಾರ ಜಿಲ್ಲೆ ಮತ್ತು ರಾಜ್ಯಕ್ಕೆ ಬಿಟ್ಟಿದ್ದು, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯವರು ಈಗಾಗಲೇ ನಮ್ಮಲ್ಲಿ ಅಭಿಪ್ರಾಯ ಸಂಗ್ರಹಿಸಿ ಹೋಗಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ತಿಳಿಸಿದ್ದಾರೆ.
ಪುತ್ತಿಲ ಪರಿವಾರದಿಂದ ಫೆ.5 ರಂದು ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ, ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನ ಕೊಡುವುದು ಸೇರಿದಂತೆ ಮೂರು ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು.
ಈ ಕುರಿತು ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರತಿಕ್ರಿಯೆ ನೀಡಿದ್ದು, ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆಯಾಗುವುದು ಮತ್ತು ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆ, ಜವಾಬ್ದಾರಿ ನೀಡುವ ವಿಚಾರ ನಮ್ಮ ತೀರ್ಮಾನವಲ್ಲ, ಅದು ಜಿಲ್ಲೆ ಮತ್ತು ರಾಜ್ಯದ ಪ್ರಮುಖರ ನಿರ್ಧಾರಕ್ಕೆ ಬಿಟ್ಟ ವಿಚಾರ. ಇತ್ತೀಚೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅವರು ಪುತ್ತೂರಿನಲ್ಲಿ ಬಿಜೆಪಿಯ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಂಗ್ರಹಿತ ಅಭಿಪ್ರಾಯವನ್ನು ರಾಜ್ಯಕ್ಕೆ ತಿಳಿಸಿದ್ದಾರೆ.
ಮುಂದಿನ ತೀರ್ಮಾನ ಎನಿದ್ದರೂ ಜಿಲ್ಲೆ ಮತ್ತು ರಾಜ್ಯದ ಪ್ರಮುಖರಿಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.