ವಿಟ್ಲ : ಕೇಪು ಗ್ರಾಮದ ಅಡ್ಯನಡ್ಕದ ಯುವಕನೊಬ್ಬನ ಮನೆಯ ಮುಂದೆ ಉತ್ತರ ಭಾರತ ಮೂಲದ ಯುವತಿಯೊಬ್ಬಳು ಬಂದು ಯುವಕನನ್ನು ತನಗೆ ಒಪ್ಪಿಸುವಂತೆ ಪ್ರತಿಭಟನೆಗೆ ಕೂತ ವಿಚಿತ್ರ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಯುವತಿಯನ್ನು ಮನವೊಲಿಸಲು ವಿಫಲರಾದ ವಿಟ್ಲ ಪೊಲೀಸರು ರಾತ್ರಿ ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಭಾರತದ ಜಲಂದರ್ ಮೂಲದ ಯುವತಿ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂದರ್ಭ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿದೆ ಎನ್ನಲಾಗಿದೆ.
ಮಂಗಳವಾರ ಸಾಯಂಕಾಲ ಅಡ್ಯನಡ್ಕದ ಮನೆ ಬಳಿಗೆ ಬಂದ ಯುವತಿಗೆ ಪ್ರೀತಿ ಮಾಡುವುದಾಗಿ ಹೇಳಿದ ಯುವಕ ಸಿಕ್ಕಿಲ್ಲ. ಇದರಿಂದ ಯುವಕನನ್ನು ತನಗೆ ಒಪ್ಪಿಸುವಂತೆ ಪಟ್ಟು ಹಿಡಿದು ಮನೆಯ ಮುಂದೆ ಕೂತಿದ್ದಾಳೆ. ಸ್ಥಳೀಯರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ವಿಟ್ಲ ಠಾಣೆಯಿಂದ ಆಗಮಿಸಿದ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಎರಡು ಸಮುದಾಯದ ಜನರು ಸೇರಿದ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.