ಮಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ ಹನ್ನೊಂದು ವರ್ಷ. ಈ ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರ ಸ್ಮಾರಕಕ್ಕೆ ತೆರಳಿ ಉಸ್ತುವಾರಿ ಸಚಿವರಾದಂತಹ ಕೋಟಾ ಶ್ರೀನಿವಾಸ್ ಪೂಜಾರಿಯವರು ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್ ರವರು ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. 2010ರಲ್ಲಿ ನಡೆದ ಈ ದುರಂತದಲ್ಲಿ ಪೈಲಟ್, ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಮುಂಜಾನೆ ಏರ್ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತ ಹನ್ನೊಂದು ವರ್ಷಗಳೇ ಕಳೆದರೂ ಕಹಿ ಘಟನೆ ಮಾತ್ರ ಎಲ್ಲರ ಮನದಲ್ಲಿ ಜೀವಂತವಾಗಿದೆ.
ಆ ವಿಮಾನದಲ್ಲಿ ಒಟ್ಟು 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. 8 ಮಂದಿ ಬದುಕುಳಿದಿದ್ದರು. ಮೃತಪಟ್ಟವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳದವರಿದ್ದರು.
ರನ್‌ವೇಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಿಯಂತ್ರಣ ತಪ್ಪಿ ವಿಮಾನ ರನ್‌ವೇ ಬಿಟ್ಟು ಹೊರಕ್ಕೆ ಹೋಗಿ ನೇರವಾಗಿ ವಿಮಾನ ನಿಲ್ದಾಣದ ಆವರಣ ಗೋಡೆಯ ಫ್ಯಾನ್‌ಗೆ ಢಿಕ್ಕಿ ಹೊಡೆದು ಗುಡ್ಡೆಯಿಂದ ಕೆಳಗುರುಳಿತ್ತು. ವಿಮಾನದಲ್ಲಿದ್ದ ಹಲವು ಪ್ರಯಾಣಿಕರು ಗುರುತಿಸಲಾಗದಷ್ಟು ಸಜೀವವಾಗಿ ದಹನವಾಗಿದ್ದರು.