ಈಗೇನು ಕುಳಿತಲ್ಲಿಂದಲೇ ಆನ್‌ಲೈನ್ ಮೂಲಕ ವಾಹನಗಳನ್ನ ಬುಕ್ ಮಾಡಿಕೊಂಡು ಅಂದುಕೊಂಡಲ್ಲಿಗೆ ಹೋಗಬಹುದು. ಆಟೋ, ಕಾರು, ಬೈಕ್ ಅನ್ನು ಬುಕ್ ಮಾಡಿಕೊಂಡು ಜನರು ಆಫೀಸ್, ಮನೆ, ಪಾರ್ಕ್ ಹೀಗೆ ತಾವಂದುಕೊಂಡಲ್ಲಿಗೆ ಹೋಗ್ತಿರುತ್ತಾರೆ. ಬೆರಳ ತುದಿಯಿಂದ ಬೇಕಾದಷ್ಟು ವ್ಯಾಪಾರ-ವ್ಯವಹಾರ ಮಾಡುವ ಈಗಿನ ಜನರಿಗೆ ರೂಢಿಯಾಗಿದೆ. ಆದ್ರೆ ಹೀಗೆ ಮಾಡುವಾಗ ಕೊಂಚ ಎಚ್ಚರದಿಂದಿರಬೇಕು. ರ‍್ಯಾಪಿಡೋ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿ ತಳ್ಳಿಕೊಂಡು ಹೋಗ್ತಿದ್ದರು ಗ್ರಾಹಕನೊಬ್ಬ ಹಾಗೇ ಕುಳಿತುಕೊಂಡಿದ್ದಾನೆ.
ಈ ಘಟನೆ ನಡೆದಿರೋದು ತೆಲಂಗಾಣದ ಹೈದರಾಬಾದ್ ನಗರದಲ್ಲಿ. ಗ್ರಾಹಕನೊಬ್ಬ ರ‍್ಯಾಪಿಡೋ ಬೈಕ್ ಅನ್ನು ಬುಕ್ ಮಾಡಿದ್ದಾನೆ. ಅದರಂತೆ ಆ ಬೈಕ್ನಲ್ಲಿ ಗ್ರಾಹಕನನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಬೈಕ್ನಲ್ಲಿ ಪೆಟ್ರೋಲ್ ಖಾಲಿ ಆಗಿದ್ದು, ಅರ್ಧ ದಾರಿಯಲ್ಲೇ ಕೈಕೊಟ್ಟಿದೆ. ಹೀಗಾಗಿ ಸವಾರ ಪೆಟ್ರೋಲ್ ಸಿಗಬಹುದೆಂದು ಬೈಕ್ ತಳ್ಳಿಕೊಂಡು ಹೋಗುತ್ತಿದ್ದಾನೆ. ಆದರೆ ಇದು ಯಾವುದನ್ನು ಲೆಕ್ಕಿಸದ ಗ್ರಾಹಕ ಮಾತ್ರ ಆ ಬೈಕ್ನಲ್ಲಿ ಹಾಗೇ ಕುಳಿತುಕೊಂಡಿದ್ದು, ಸವಾರ ತಳ್ಳಿಕೊಂಡೇ ಹೋಗಿದ್ದಾನೆ.
ರ‍್ಯಾಪಿಡೋ ಬೈಕ್ನ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಗ್ರಾಹಕನ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಈ ರೀತಿ ರ‍್ಯಾಪಿಡೋ ಅಲ್ಲ, ಎಲ್ಲರಿಗೂ ಆಗುತ್ತದೆ. ಮಾನವೀಯತೆ ದೃಷ್ಟಿಯಿಂದ ಕೆಳಗಿಳಿದು ನಡೆದುಕೊಂಡು ಹೋಗಿದ್ದರೇ ಗ್ರಾಹಕ ಮನುಷ್ಯ ಆಗುತ್ತಿದ್ದ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೀಡಿಯೋವನ್ನು ರ‍್ಯಾಪಿಡೋ ಬೈಕ್ ಹಿಂದೆ ಹೋಗುತ್ತಿದ್ದ ಕಾರಿನಲ್ಲಿದ್ದವರು ಸೆರೆ ಹಿಡಿದಿದ್ದಾರೆ.




























