ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 15 ನೇ ಬಜೆಟ್ ಮಂಡನೆ ಮಾಡಿದ್ದು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಆಯ್ದ 20 ತಾಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್‌ಗಳನ್ನಾಗಿ ಮೇಲ್ದರ್ಜೆಗೇರಿಸಲು 10 ಕೋಟಿ ರೂ. ಅನುದಾನ ನೀಡಲಾಗುವುದು. ಇನ್ನು ದುಸ್ಥಿತಿಯಲ್ಲಿರುವ 200 ಪಶುವೈದ್ಯ ಸಂಸ್ಥೆಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡುವ ಗುರಿ ಇದೆ ಎಂದು ಸಿಎಂ ತಿಳಿಸಿದರು.
ಕರ್ನಾಟಕ ರೈತ ಸಮೃದ್ಧಿ ಯೋಜನೆಯೊಂದಿಗೆ ಸಂಯೋಜಿಸಿ ಕುರಿ ಸಾಕಾಣಿಕೆ, ಹೈನುಗಾರಿಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ವಲಸೆ ಕುರಿಗಾರರ ಅಭ್ಯುದಯಕ್ಕೆ ಕ್ರಮ ಹಾಗೂ ಅವರ ಮೇಲಿನ ಶೋಷಣೆ ಮತ್ತು ದೌರ್ಜನ್ಯ ತಡೆಯಲು ‘ಕುರಿಗಾಹಿಗಳ ಮತ್ತು ಸ್ವತ್ತುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ’ ಜಾರಿಗೊಳಿಸುವ ಯೋಜನೆಯಿದೆ ಎಂದರು.
4,200 ಕೋಟಿ ರೂಪಾಯಿ ವೆಚ್ಚದಲ್ಲಿ 30 MTPA ಸರ್ವಋುತು ಬಂದರು
ಬಜೆಟ್‍ನಲ್ಲಿ ಬಂದರು ಮತ್ತು ಒಳನಾಡಿನ ಅಭಿವೃದ್ಧಿಗೆ ಸರ್ಕಾರ ಚಿತ್ತಹರಿಸಿದೆ. ರಾಜ್ಯದ 320 ಕಿ.ಮೀಟರ್ ಉದ್ದದ ಕರಾವಳಿ ತೀರಗಳ ಸಮರ್ಪಕ ಬಳಕೆಗೆ ಒತ್ತು ನೀಡಲು ಮಂದಾಗಿದೆ. ಬಂದರು ಮತ್ತು ರೈಲುಗಳು ವಿಮಾನ ಸಂಪರ್ಕವನ್ನ ಸುಗಮಗೊಳಿಸಲು ಯೋಜನೆ ಹಾಕಿಕೊಂಡಿದೆ. ಹೀಗಾಗಿ ಕೆಲವು ವರ್ಷಗಳಲ್ಲಿ ಅಂದಾಜು 20 ಸಾವಿರ ಕೋಟಿ ಹೂಡಿಕೆ ಮಾಡುವ ಗುರಿಯನ್ನು ಸಿದ್ದರಾಮಯ್ಯ ಸರ್ಕಾರ ಹೊಂದಿದೆ.
2024-2025ನೇ ಸಾಲಿನ ಬಜೆಟ್‍ನಲ್ಲಿ ಸಮುದ್ರ ಸಾರಿಗೆ, ಸರಕು ಸಾಗಣೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಒತ್ತು ನೀಡಿದೆ. ರಾಜ್ಯದ ಜಲ ಸಾರಿಗೆ ಮೂಲಸೌಕರ್ಯಗಳ ಅಭಿವೃದ್ದಿಗೆ ಹೂಡಿಕೆ ಮಾಡಲು ಮುಂದಾಗಿದೆ. ಖಾಸಗಿ ಹೂಡಿಕೆಗಳನ್ನ ಆಕರ್ಷಿಸಲು ಕರ್ನಾಟಕ ಜಲಸಾರಿಗೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.
ಇನ್ನು ಸಾಗರ ಮಾಲಾ ಯೋಜನೆಯಡಿ ಕಡಲ ತೀರದ ವ್ಯಾಪಾರಕ್ಕೆ ಆದ್ಯತೆ ನೀಡಿದೆ. ಅಂದಾಜು 1,017 ಕೋಟಿ ವೆಚ್ಚದಲ್ಲಿ 26 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ಇನ್ನೂ 1,145 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಯೋಜನಾ ವರದಿ ತಯಾರಿಸಿದೆ. 12 ಕಾಮಗಾರಿಗಳ ವರದಿಗಳನ್ನ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 30 MTPA ಸರ್ವಋುತು ಬಂದರು ನಿರ್ಮಾಣ ಮಾಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ. 4,200 ಕೋಟಿ ವೆಚ್ಚದಲ್ಲಿ ಹೊಸ ಆಳಸಮುದ್ರ ಸರ್ವಋತು ಬಂದರು ನಿರ್ಮಿಸುವುದಾಗಿ ಹೇಳಿದೆ. ಇದಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಪಾವಿನಕುರ್ವೆಯಲ್ಲಿ ಎರಡನೇ ಬೃಹತ್ ಬಂದರು ನಿರ್ಮಾಣ. ಪಿಪಿಪಿ ಮಾದರಿಯಲ್ಲಿ ಅಂದಾಜು 3,048 ಕೋಟಿ ವೆಚ್ಚದಲ್ಲಿ ಬಂದರು ಅಭಿವೃದ್ಧಿ ಮಾಡಲು ಚಿಂತಿಸಿದೆ.
ಕಾರವಾರ, ಮಲ್ಪೆ, ಹಳೇ ಮಂಗಳೂರು ಬಂದರುಗಳಲ್ಲಿ 4 ಬರ್ತ್ ಅಭಿವೃದ್ಧಿ ಮಾಡುವುದಾಗಿ ತಿಳಿಸಿದೆ. ಕಾರವಾರ, ಹಳೇ ಮಂಗಳೂರು ಸೇರಿ 11 ಕಿರು ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಮಾಡಲಿದೆ. ಉತ್ತರಕನ್ನಡದ ಮಂಕಿಯಲ್ಲಿ ವಿವಿದೋದ್ದೇಶ ಬಂದರು ಅಭಿವೃದ್ಧಿ ಬಗ್ಗೆ ಚಿಂತಿಸಿದೆ. ಕಾರವಾರ ಬಂದರಿನಲ್ಲಿ ಬೆಂಕಿ ನಂದಿಸುವ ಉಪಕರಣಗಳ ಅಳವಡಿಕೆಗೆ ಕಾಮಗಾರಿ ಮಾಡುವುದಾಗಿ ಸರ್ಕಾರ ತಿಳಿಸಿದೆ.
ಇನ್ನು ಹಳೇ ಮಂಗಳೂರು ಬಂದರಿನಲ್ಲಿ 350 ಮೀ ಉದ್ದದ ಕೋಸ್ಟರ್ ಬರ್ತ್ ನಿರ್ಮಾಣ ಮತ್ತು 2024-25ರಲ್ಲೇ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಮತ್ತು ಬಂದರು ನಿರ್ಮಾಣ ಮಾಡಲಿದೆ. ಐಐಟಿ ಮದ್ರಾಸ್ ಸಹಯೋಗದೊಂದಿಗೆ ಪ್ರವಾಸೋದ್ಯಮ ಬಂದರು ಅಬಿವೃದ್ಧಿ ಮಾಡಲಿದೆ. ಮಂಗಳೂರಿನ ಗುರುಪುರು, ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ನಿರ್ಮಾಣ ಮಾಡುವುದಾಗಿ ಈ ಬಾರಿಯ ಬಜೆಟ್‍ನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಪ್ರಗತಿ ಮೇಲ್ವಿಚಾರಣೆ, ಅಂತರ್ ಇಲಾಖಾ ತೊಡಕು ಬಗೆಹರಿಸಲು ಕ್ರಮವಹಿಸುವುದಾಗಿ ಸಿಎಂ ಸಿದ್ದರಾಮಯ್ಯನವರು ಬಜೆಟ್‍ನಲ್ಲಿ ತಿಳಿದಿದ್ದಾರೆ. ರಾಜ್ಯದಲ್ಲಿ ಮೂಲ ಸೌಕರ್ಯ ಯೋಜನೆಗಳ ಪ್ರಗತಿಗೆ ಪ್ರತ್ಯೇಕ ಘಟಕ ಸ್ಥಾಪಿಸುವುದಾಗಿ ಹೇಳಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪ್ರತ್ಯೇಕ ಘಟಕಗಳ ಸ್ಥಾಪಿಸಲಾಗುತ್ತದೆ ಎಂದು ಬಜೆಟ್‍ನಲ್ಲಿ ಹೇಳಿದ್ದಾರೆ.
ಮಂಗಳೂರಿನ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂ ಮೀಸಲು
ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನ ನೀಡಲು 10 ಕೋಟಿ ರೂ ಮೀಸಲಿಟ್ಟಿರೋದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ನೀಡೋದಾಗಿ ಹೇಳಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ವಕ್ಸ್ ಆಸ್ತಿಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸುವ ಭರವಸೆಯನ್ನು ನೀಡಿದ್ದಾರೆ. ವಕ್ಫ್ ಸಂಸ್ಥೆಯ ಧಾರ್ಮಿಕ ಗುರುಗಳಿಗೆ ಹಾಗೂ ಮುತವಲ್ಲಿಗಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಲು ತರಬೇತಿ ಕಾರ್ಯಗಾರಗಳನ್ನು ಏರ್ಪಡಿಸೋದಾಗಿ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 20 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದಿದ್ದಾರೆ. ಮಂಗಳೂರಿನ ಹಜ್ ಭವನದ ನಿರ್ಮಾಣ ಕಾಮಗಾರಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದಾರೆ.




























