ಬಂಟ್ವಾಳ : ಕಾರಿಗೆ ಅಡ್ಡಗಟ್ಟಿ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ನೀಡಿರುವ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರಿಕೊಂಬು ನಿವಾಸಿ ಜೀವನ ಎಂಬವರು ನೀಡಿದ ದೂರಿನ ಮೇರೆಗೆ ಶರತ್ ಮೊಗರ್ನಾಡು, ಮ್ಯಾಕ್ಸಿಂ ಮಿನೇಜಸ್ ಪೈತಾಜೆ, ರೋಹಿತ್ ಪೂಜಾರಿ, ಉಮೇಶ ಭಂಡಾರಿ, ಅಭಿ ತಾಳಿಪಡ್ಪು, ಯಶೋಧರ ಕೇದಿಗೆ, ರಮೇಶ ಸಪಲ್ಯ, ಚೇತು ಪೂಜಾರಿ ಪೈತಾಜೆ, ಸಿನಿತ್ ಡಿಸೋಜಾ ಪೈತಾಜೆ, ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಫೆ.12 ರಂದು ಸಂಜೆ ಜೀವನ ತಂದೆಯ ಮನೆಯಾದ ನರಿಕೊಂಬು ಗ್ರಾಮದ ಪೈತಾಜೆಯಿಂದ ಮಂಗಳೂರಿನ ಮನೆಗೆ ಕಾರಿನಲ್ಲಿ ಹೋಗುತ್ತಿರುವಾಗ ಶರತ್, ಮೊಗರ್ನಾಡು, ಮ್ಯಾಕ್ಸಿಂ ಮಿನೇಜಸ್ ಹಾಗೂ ಇತರರು 2 ಕಾರು ಹಾಗೂ 1 ಬೈಕ್ ಗಳಲ್ಲಿ ಬಂದು, ಕಾರಿಗೆ ಅಡ್ಡಗಟ್ಟಿ ಕತ್ತಿ ಹಾಗೂ ದೊಣ್ಣೆಗಳನ್ನು ಹಿಡಿದು, ಅವಾಚ್ಯವಾಗಿ ಬೈದು, ಕಾರಿಗೆ ಹಾನಿ ಮಾಡಿರುತ್ತಾರೆ.
ಶರತ್ ಎಂಬವರು ಜೀವನ ಮೇಲೆ ಹಲ್ಲೆ ನಡೆಸಿ, ಕಾರನ್ನು ಚರಂಡಿಗೆ ದೂಡಿ ಹಾಕಿರುತ್ತಾರೆ. ಆಗ ಸಿನಿತ್ ಡಿಸೋಜ ರವರು ಕತ್ತಿಯಿಂದ ಕಡಿಯಲು ಪ್ರಯತ್ನಿಸಿ ಜೀವಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ- 47/2024 ಕಲಂ: 341, 324, 427, 504, 506, 143, 147 ಜೊತೆ 149 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























