ವಿಜಯನಗರ : ಹೊಸಪೇಟೆ ರೈಲು ನಿಲ್ದಾಣದಲ್ಲಿ ಮೈಸೂರು- ಅಯೋಧ್ಯಾಧಾಮ ರೈಲಿನಲ್ಲಿ ಅನ್ಯಕೋಮಿನವರಿಂದ ಆಕ್ಷೇಪಾರ್ಹ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ, ಓರ್ವ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಅಯೋಧ್ಯೆಗೆ ಹೋಗಿ ಬರುತ್ತಿದ್ದ ರಾಮಭಕ್ತರಿರುವ ರೈಲು ಬೋಗಿಗೆ ನುಗ್ಗಿದ್ದ ಮೂವರು ವ್ಯಕ್ತಿಗಳು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಸದ್ಯ ಈ ಸಂಬಂಧ ಗದಗ ಬಳಿ ಓರ್ವನನ್ನು ರೈಲ್ವೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಅಯೋಧ್ಯೆ ರೈಲಿನಲ್ಲಿ ಈ ಘಟನೆಯಿಂದ ಕೆರಳಿದ ಶ್ರೀರಾಮ ಭಕ್ತರು ಮೂವರನ್ನು ಹೇಗೆ ಬಿಟ್ಟು ಕಳಿಸಿದ್ದೀರಿ ಎಂದು ಪಟ್ಟ ಹಿಡಿದಿದ್ದರು. ಹೀಗಾಗಿ ರೈಲು ಹೊಸಪೇಟೆಗೆ 8.15ಕ್ಕೆ ಬಂದಿದ್ದರೂ 10 ಗಂಟೆಗೆ ಬಳ್ಳಾರಿ ಕಡೆಗೆ ತೆರಳಿತು. 2 ಗಂಟೆಗಳ ಕಾಲ ನಿಲ್ದಾಣದಲ್ಲೇ ರೈಲು ನಿಂತಿತ್ತು. ಬಳಿಕ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಉಪವಿಭಾಗದ ಪೊಲೀಸ್ ಅಧಿಕಾರಿಗಳಿಂದ ಶ್ರೀರಾಮಭಕ್ತರ ಮನವೊಲಿಸಲಾಯಿತು. ನಂತರ ಮುಂಜಾಗ್ರತಾ ಕ್ರಮವಾಗಿ ರೈಲಿನೊಳಗೆ ರೈಲ್ವೆ ಪೊಲೀಸರು, ಸ್ಥಳೀಯ ಪೊಲೀಸರು ಸಮೇತ ಬಳ್ಳಾರಿ ಕಡೆಗೆ ತೆರಳಲು ಅನುವು ಮಾಡಿಕೊಡಲಾಯಿತು.