ಬೆಳಗಾವಿ : ಪ್ರಿಯಕರ ಮಾಡಿದ ಪಾಪದ ಕೆಲಸಕ್ಕೆ ಇದೀಗ ಬೇರೊಬ್ಬನ ಜೊತೆ ಮದುವೆಯಾಗಿದ್ದ ಯುವತಿಯ ಬದುಕು ಬೀದಿಗೆ ಬಿದ್ದಿದೆ. ಸಂಸಾರ ಹಾಳು ಮಾಡಿದ ನೀನು, ಈಗಲಾದರೂ ನನ್ನ ಮದುವೆಯಾಗು ಎಂದು ಕಣ್ಣೀರು ಇಡುತ್ತ ಪ್ರಿಯಕರನ ಮನೆ ಮುಂದೆ ಪ್ರತಿಭಟನೆ ಮಾಡ್ತಿದ್ದಾಳೆ.
ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದ ಸೋಮವಾರಪೇಟೆಯಲ್ಲಿ ಹೆಣ್ಮಗಳೊಬ್ಬಳು ಕಣ್ಣೀರು ಇಡುತ್ತ ಕೂತಿದ್ದಾಳೆ. ಮಹಿಳೆಯ ರೋದನೆ ಮತ್ತು ಆಕ್ರೋಶಕ್ಕೆ ಕಾರಣ ಮಾಜಿ ಪ್ರಿಯಕರ ಎನಿಸಿಕೊಂಡಿರೋ ವಿಕೃತ ಮನಸ್ಸಿನ ಮುತ್ತುರಾಜ್ ಬಸವರಾಜ್ ಇಟಗಿ. ಈ ಮುತ್ತುರಾಜ್ ಬಸವರಾಜ್ ಇಟಗಿ ಬರೋಬ್ಬರಿ 6 ವರ್ಷಗಳಿಂದ ಆಕೆಯನ್ನು ಪ್ರೀತಿಸುತ್ತಿದ್ದನಂತೆ.
ಮಕ್ಕಳು ಪ್ರೀತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಮದುವೆ ಆಗುವಂತೆ ಪೋಷಕರು ಹೇಳಿದ್ದರು. ಆದರೆ ಆಕೆಯನ್ನು ಮದುವೆ ಆಗಲು ಮುತ್ತುರಾಜ್ ನಿರಾಕರಿಸಿದ್ದ. ಹೀಗಾಗಿ ವಯಸ್ಸಿಗೆ ಬಂದ ಮಗಳನ್ನು ಹಾಗೆಯೇ ಬಿಡಬಾರದು ಎಂದು ಫೆಬ್ರವರಿ 14 ರಂದು ಬೇರೊಬ್ಬ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದರು. ಬರೋಬ್ಬರಿ 10 ಲಕ್ಷ ರೂಪಾಯಿ ಖರ್ಚು ಮಾಡಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು.
ಮದುವೆಯಾಗಿ 8 ದಿನ ಕಳೆಯುತ್ತಿದ್ದಂತೆಯೇ ಆರೋಪಿ ಮುತ್ತುರಾಜ್, ಆಕೆಯ ಗಂಡನ ಮನೆಗೆ ಎಂಟ್ರಿ ನೀಡಿದ್ದಾನೆ. ಅಲ್ಲಿ ಮದುಮಗನ ಭೇಟಿ ಮಾಡಿ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದ. ಇದನ್ನು ನೋಡಿದ ಹುಡುಗನ ಕಡೆಯವರು, ಜಗಳವಾಡಿ ಆಕೆಯನ್ನು ತವರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
6 ವರ್ಷ ಪ್ರೀತಿಸಿದ್ರೂ ಮದುವೆ ಆಗಲಿಲ್ಲ. ಈಗ ನಾನು ಬೇರೆ ಮದುವೆ ಆಗುತ್ತಿದ್ದಂತೆಯೇ ಮನೆ ಮುರಿದು ನನ್ನ ಜೀವನ ಹಾಳು ಮಾಡಿದ ಎಂದು ಯುವತಿ ಕಣ್ಣೀರು ಹಾಕುತ್ತಿದ್ದಾಳೆ. ಅಲ್ಲದೇ ನ್ಯಾಯಕ್ಕಾಗಿ ಕಿತ್ತೂರು ಪೊಲೀಸ್ ಠಾಣೆಗೆ ಹೋದರೂ ಪೊಲೀಸರು ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದಾಳೆ ಎಂದು ಆರೋಪಿಸಿದ್ದಾಳೆ. ನನಗೆ ನ್ಯಾಯ ಸಿಕ್ಕಿಲ್ಲ ಎಂದರೆ ಹುಡುಗನ ಮನೆ ಮುಂದೆ ವಿಷ ಕುಡಿದು ಸಾಯುತ್ತೇನೆ ಎಂದು ಹೇಳಿದ್ದಾಳೆ.