ಬೆಂಗಳೂರು : ಲೋಕಸಭೆ ಚುನಾವಣೆ ತಯಾರಿ ಸಂಬಂಧ ಬಿಜೆಪಿ ಮಹತ್ವದ ಸಭೆ ನಡೆಸಿದೆ.
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗಾಗಿ ಪಕ್ಷ ಸಂಘಟನೆ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಈ ವೇಳೆ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಹಾಗಾದ್ರೆ, ಪ್ರಮುಖರ ಸಭೆಯಲ್ಲಿ ಏನೆಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎನ್ನುವ ವಿವರ ಇಲ್ಲಿದೆ.
ಮುಂದಿನ ವಾರದಿಂದ ಕೇಂದ್ರದ ಬಿಜೆಪಿ ನಾಯಕರನ್ನೊಳಗೊಂಡ 4 ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮತ್ತು ಪ್ರವಾಸ ಸಂದರ್ಭದಲ್ಲಿ 5 ಹಂತದಲ್ಲಿ ಸಂಘಟನಾತ್ಮಕ ಸಭೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.
5 ಹಂತದಲ್ಲಿ ಸಂಘಟನಾತ್ಮಕ ಸಭೆ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ಪಣತೊಟ್ಟಿರುವ ಬಿಜೆಪಿ, ಮೊದಲಿಗೆ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಿದೆ.
ಮತದಾರರನ್ನು ತಲುಪಲು ರಾಜ್ಯ ಪ್ರವಾಸ ಸಂದರ್ಭದಲ್ಲಿ 5 ಹಂತದಲ್ಲಿ ಸಂಘಟನಾತ್ಮಕ ಸಭೆ ಮಾಡಲು ಬಿಜೆಪಿ ಪ್ರಮುಖರ ಸಭೆಯಲ್ಲಿ ನಿರ್ಧಾರವಾಗಿದೆ.
ಬಿಜೆಪಿ ಕಾರ್ಯಕರ್ತರು- ಬೂತ್ ಅಧ್ಯಕ್ಷರ ಜೊತೆ ಸಭೆ, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜೊತೆ ಸಭೆ, ಚುನಾವಣಾ ನಿರ್ವಹಣಾ ಸಮಿತಿ ಸಭೆ, ಸಾರ್ವಜನಿಕ ಸಭೆ ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾಜಿಕ ಕೊಡುಗೆ ನೀಡಿದವರ ಮನೆಗೆ ಭೇಟಿ ನೀಡಬೇಕೆನ್ನುವುದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೋರ್ ಕಮಿಟಿ ಸದಸ್ಯರನ್ನೊಳಗೊಂಡ ಪ್ರಮುಖರ ಸಭೆಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ್ ಬೊಮ್ಮಾಯಿ, ವಿಪಕ್ಷ ಉಪನಾಯಕ ಬೆಲ್ಲದ್ ಸೇರಿ ಹಲವರು ಭಾಗಿಯಾಗಿದ್ದರು.
ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ
ಇನ್ನು ಈ ಬಿಜೆಪಿ ಪ್ರಮುಖರ ಸಭೆಗೂ ಮೊದಲು ಹವ್ಯಕ ಭವನದಲ್ಲಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿರುವ ಬಿ.ವೈ. ವಿಜಯೇಂದ್ರ, ದೇಶದ ಹಿತದೃಷ್ಟಿ, ದೇಶದ ರಕ್ಷಣೆಗಾಗಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನರು ಬಯಸಿದ್ದಾರೆ. ರಾಜ್ಯದಲ್ಲೂ 28ಕ್ಕೆ 28 ಸೀಟುಗಳನ್ನು ಬಿಜೆಪಿ- ಜೆಡಿಎಸ್ ಪಕ್ಷಗಳು ಗೆಲ್ಲಲಿವೆ. ಬಿಜೆಪಿ ಕಾರ್ಯಕರ್ತರು, ಪ್ರಮುಖರು ಮೋದಿಯವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.
ಒಬಿಸಿ ಮೋರ್ಚಾದ ಪದಾಧಿಕಾರಿಗಳು ತಾವು ಬಿಜೆಪಿ ಕಾರ್ಯಕರ್ತರು ಎಂಬುದನ್ನು ಮರೆಯಬಾರದು. ನಮ್ಮ ಪದಾಧಿಕಾರಿಗಳು ತಮ್ಮ ಬೂತ್ ಕಡೆ ಗಮನ ಹರಿಸಬೇಕು. ಮತದಾರರ ಪಟ್ಟಿ, ಬೂತ್ ಕಡೆ ಗಮನ ಕೊಡಬೇಕು. ಎಷ್ಟು ಹೆಸರು ಸೇರ್ಪಡೆ ಆಗಿದೆ? ಎಷ್ಟು ಹೆಸರು ರದ್ದಾಗಿದೆ ಎಂಬ ಕಡೆ ಗಮನಿಸಬೇಕು. ಹಾಗೇ 100 ಮತ ಬಂದಿದ್ದರೆ ಅದನ್ನು 200 ಮಾಡುವುದು ಹೇಗೆ? 500 ಮತ ಬಂದಿದ್ದರೆ ಅದನ್ನು ಮತ್ತಷ್ಟು ಹೆಚ್ಚಿಸುವುದು ಹೇಗೆ ಎಂಬ ಕಡೆ ಗಮನ ಹರಿಸಬೇಕಿದೆ. ಕ್ಷೇತ್ರಕ್ಕೆ ತೆರಳಿ ಬೂತ್ ಬಲಪಡಿಸುವ ಕಡೆ ಯೋಜನೆ ಮತ್ತು ಕಾರ್ಯಕ್ರಮ ರೂಪಿಸಬೇಕು ಎಂದು ಕರೆ ನೀಡಿದರು.