ಲಕ್ನೋ : ಜ್ಞಾನವಾಪಿ ಮಸೀದಿಯ ವ್ಯಾಸ್ ತಹಖಾನದಲ್ಲಿ ಹಿಂದೂಗಳ ಪೂಜೆಗೆ ಅವಕಾಶವನ್ನು ಪ್ರಶ್ನಿಸಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ.
ಜ್ಞಾನವಾಪಿ ಮಸೀದಿಯ ಒಳಗೆಡೆಯ ಎಂದಿನಂತೆ ಪೂಜೆ ಮುಂದುವರೆಯಲಿದೆ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜ್ಞಾನವಾಪಿ ಮಸೀದಿಯ ವ್ಯಾಸ್ ತಹಖಾನದಲ್ಲಿ ಪೂಜೆಗೆ ವಾರಾಣಸಿ ಜಿಲ್ಲಾ ಕೋರ್ಟ್ ಅವಕಾಶ ಮಾಡಿಕೊಟ್ಟಿತ್ತು. ಈ ಸಂಬಂಧ ಮಸೀದಿಯ ಆಡಳಿತ ಮಂಡಳಿ ಅಲಹಾಬಾದ್ ಹೈಕೋರ್ಟ್ನ ಮೊರೆ ಹೋಗಿತ್ತು. ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ಇಂದು ತಹಖಾನದಲ್ಲಿ ಹಿಂದೂಗಳು ಪೂಜೆ ಮಾಡಬಹುದು ಎಂದು ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನಂತೆ ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿರುವ ಹಿಂದೂ ದೇವರುಗಳಿಗೆ ಪೂಜೆ ಮುಂದುವರೆಯಲಿದೆ.
ಅಲಹಾಬಾದ್ ಹೈ ಕೋರ್ಟ್ ಆದೇಶದ ನಂತರ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾತನಾಡಿ, ಅಂಜುಮನ್ ಇಂಟೆಜಾಮಿಯಾ ಮೇಲ್ಮನವಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿದೆ. ಇದರಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ.17 ಮತ್ತು 31 ರಂದು ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಇದನ್ನು ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ. ಹೀಗಾಗಿ ಪೂಜೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಏನಿದು ವ್ಯಾಸ್ ಕಾ ತಹಖಾನಾ..?
ಜ್ಞಾನವಾಪಿಯಲ್ಲಿ ಒಟ್ಟು 4 ತಹಖಾನಾ ಇವೆ. ಒಂದು ವ್ಯಾಸ್ಜೀ ಕುಟುಂಬಸ್ಥರ ಹಿಡಿತದಲ್ಲಿತ್ತು. ಅಲ್ಲಿಯೇ ವಾಸಿಸುತ್ತಿದ್ದ ಈ ಕುಟುಂಬ, 1993 ಕಡೆಯದಾಗಿ ಜ್ಞಾನವಾಪಿಯಲ್ಲಿ ಪ್ರಾರ್ಥನೆ ಸಲ್ಲಿಸಿದೆ. ಆ ಬಳಿಕ ಶೈಲೇಂದ್ರ ಕುಮಾರ್ ವ್ಯಾಸ್ ಅವರು ಅಂಜುಮನ್ ಇಂತೇಜಾಮಿಯಾ ಮಸೀದಿ (Anjuman Intezamia Masajid Committee) ಕಮಿಟಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇವರು ವ್ಯಾಜಿ ಕುಟುಂಬದ ಸದಸ್ಯರಾಗಿದ್ದಾರೆ.
ಕಾಶಿ ವಿಶ್ವನಾಥ ಟ್ರಸ್ಟ್ಗೆ ಪೂಜೆಯ ಉಸ್ತುವಾರಿ
ಇತ್ತೀಚಿಗೆ ಬಹಿರಂಗ ASI ವರದಿ ಸಮೀಕ್ಷೆಯ ಪ್ರಕಾರ ಜ್ಞಾನವಾಪಿ ಮಸೀದಿಯಲ್ಲಿ ಭೂ ವರಾಹ, ವಿಷ್ಣು, ಗಣಪತಿ, ಶಿವಲಿಂಗಗಳು ಪತ್ತೆಯಾಗಿವೆ ಎಂದು ಹೇಳಿತ್ತು, ಈಗ ಮತ್ತೆ ಪೂಜೆ ಅವಕಾಶ ಕಲ್ಪಿಸಲಾಗಿದ್ದು, ವಿವಾದಿತ ಮಸೀದಿಯಲ್ಲಿರುವ ದೇವರ ವಿಗ್ರಹಗಳ ಪೂಜೆಯ ಉಸ್ತುವಾರಿಯನ್ನು ಕಾಶೀ ವಿಶ್ವನಾಥ ಟ್ರಸ್ಟ್ ವಹಿಸಿಕೊಳ್ಳಬೇಕು ಮತ್ತು ಮಸೀದಿಯಲ್ಲಿ ಸಾರ್ವಜನಿಕರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ ಕೇವಲ ಅರ್ಚಕರು ಮಾತ್ರ ತೆರಳಿ ಪೂಜೆ ಸಲ್ಲಿಸಬೇಕು ಎಂದು ವಾರಾಣಸಿ ಜಿಲ್ಲಾ ಕೋರ್ಟ್ ಹೇಳಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್ ಕೂಡ ಮಸೀದಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.


























