ಬೆಳ್ತಂಗಡಿ : ಚಾರ್ಮಾಡಿ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಯುವಕ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಾಳರಾಯದುರ್ಗ ಬಳಿ ಪತ್ತೆಯಾಗಿದ್ದಾರೆ.
ಧನುಷ್ ನಾಪತ್ತೆಯಾಗಿದ್ದ ಯುವಕ.
ಬೆಂಗಳೂರು ಮೂಲದ 10 ಜನ ವಿದ್ಯಾರ್ಥಿಗಳು ರವಿವಾರ (ಫೆ.25) ರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದರು. ಈ ತಂಡದಲ್ಲಿದ್ದ ಡಿವೈಎಸ್ಪಿ ಸಂಬಂಧಿ ಧನುಷ್ ನಾಪತ್ತೆಯಾಗಿದ್ದನು. ಧನುಷ್ ದಟ್ಟಾರಣ್ಯದ ಮದ್ಯೆ 700 ಅಡಿ ಕೆಳಗಿದ್ದನು. ಧನುಷ್ ನಾಪತ್ತೆಯಾಗುತ್ತಿದ್ದಂತೆ ಈ ತಂಡದಲ್ಲಿದ್ದ ಓರ್ವ ಯುವಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಜಂಟಿಯಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಾಪತ್ತೆಯಾದ ಯುವಕರ ಮೊಬೈಲ್ ನೆಟ್ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿತ್ತು. ಕೊನೆಗೆ ಧನುಷ್ ಮಧ್ಯರಾತ್ರಿ ಪತ್ತೆಯಾಗಿದ್ದಾನೆ.
ಟ್ರೆಕ್ಕಿಂಗ್ಗೆ ತಾತ್ಕಾಲಿಕ ಬ್ರೇಕ್ ಹಾಕಿದ ರಾಜ್ಯ ಸರ್ಕಾರ
ಹೊಸ ಪ್ರಮಾಣಿತ ಕಾರ್ಯ ವಿಧಾನ ಜಾರಿಯಾಗುವವರೆಗೂ ಚಾರಣಕ್ಕೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ರಾಜ್ಯದ ಯುವಜನರಲ್ಲಿ ಇತ್ತೀಚೆಗೆ ಅರಣ್ಯವ್ಯಾಪ್ತಿಯ ಗಿರಿ ಶಿಖರಗಳಲ್ಲಿ ಚಾರಣ ಮಾಡುವ ಹವ್ಯಾಸ ಅಧಿಕವಾಗಿದ್ದು, ಇದು ವಾರಾಂತ್ಯದಲ್ಲಿ ಜನದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯದ ಅಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನಸೋ ಇಚ್ಛೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು, ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಜನವರಿ 26 ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಮಾಧ್ಯಮಗಳಲ್ಲೂ ವರದಿಯಾಗಿದೆ. ಕೆಲವರು ಟೆಂಟ್ ಹಾಕಿ ರಾತ್ರಿ ಪರ್ವತದಲ್ಲಿ ಉಳಿಯುತ್ತಾರೆ ಎನ್ನಲಾಗಿದೆ. ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ತಮ್ಮ ಕಳಕಳಿ. ಆತಂಕ ವ್ಯಕ್ತಪಡಿಸಿದ್ದಾರೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಚಾರಣಕ್ಕೆ ಜನರು ದಟ್ಟ ಅರಣ್ಯವಿರುವ ಗಿರಿ ಪ್ರದೇಶಗಳಿಗೆ, ಪಶ್ಚಿಮಘಟ್ಟಕ್ಕೆ ಪ್ರತಿವಾರವೂ ಆಗಮಿಸಿದರೆ ನಿಯಂತ್ರಿಸುವುದು ಮತ್ತು ಅವರ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುವ ಅಪಾಯ ಇದೆ.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಚಾರಣ ತಾಣ (ಟ್ರಕ್ಕಿಂಗ್ ಪಾಯಿಂಟ್)ಗಳಲ್ಲೂ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮತ್ತು ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯ ವಿಧಾನ (SOP) ರೂಪಿಸುವವರೆಗೆ ಆನ್ ಲೈನ್ ಬುಕ್ಕಿಂಗ್ ಇಲ್ಲದ ಎಲ್ಲ ಚಾರಣ ತಾಣಗಳಲ್ಲಿ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸಲಾಗಿದೆ ಎಂದು ಕಳೆದ ತಿಂಗಳು ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿತ್ತು.


























