ಬೆಂಗಳೂರು : ರಾಜ್ಯಸಭೆ ಚುನಾವಣೆಯ ಫಲಿತಾಂಶದ ನಂತರ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿವರೆಗೂ ಠಾಣೆಯಲ್ಲೇ ಉಳಿದುಕೊಂಡಿದ್ದ ಅವರು ಪೊಲೀಸ್ ಸಿಬ್ಬಂದಿಯ ಜೊತೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದ ಮುಂದಿನ ಆಯಾಮ ಹಾಗೂ ತನಿಖೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದರು.
ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಜೊತೆ ಬಂದವರ ಪಟ್ಟಿ ಸಂಗ್ರಹಿಸಲಾಗಿದ್ದು, ಟೆಕ್ನಿಕಲ್ ಅನಾಲಿಸಿಸ್ ಹಾಗೂ ವೀಡಿಯೋಗಳನ್ನು ಪರಿಗಣಿಸುವ ಕಾರ್ಯ ಮಾಡಲಾಗುತ್ತಿದೆ. ಸದ್ಯ ವಿಧಾನಸೌಧ ಪೊಲೀಸರು ಘೋಷಣೆ ಕೂಗಿದಾತನ ಶೋಧ ನಡೆಸುತ್ತಿದ್ದಾರೆ.
ಘೋಷಣೆ ಕೂಗಿದ ಸಂದರ್ಭದಲ್ಲಿ ನಾಸೀರ್ ಹುಸೇನ್ ಬಳಿ ಇದ್ದ ವ್ಯಕ್ತಿಗಳನ್ನು ಕರೆಸಿ ಇಂದು (ಬುಧವಾರ) ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಪರಮೇಶ್ವರ್ ಅವರಿಗೆ ಮಾಹಿತಿ ನೀಡಲು ಕಾನೂನು, ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಮುಂದಾಗಿದ್ದಾರೆ. ಬುಧವಾರ ಬೆಳಗ್ಗೆ ಅವರು ಗೃಹ ಸಚಿವರ ನಿವಾಸಕ್ಕೆ ತೆರಳಿದ್ದಾರೆ. ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ತೆರಳಿರುವ ಹಿತೇಂದ್ರ, ಮಂಗಳವಾರದ ಘಟನೆ, ಪ್ರಕರಣದ ಬೆಳವಣಿಗೆ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ವೀಡಿಯೋ ಸಂಗ್ರಹ
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿನ ವಿಡಿಯೋ ತುಣುಕುಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ವಾಸ್ತವಾಂಶ ತಿಳಿಯುವುದಕ್ಕಾಗಿ ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತಯಾರಿ ಮಾಡಲಾಗುತ್ತಿದೆ.
ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ
ಪಾಕಿಸ್ತಾನ ಪರ ಘೋಷಣೆ ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಮಂಗಳವಾರ ರಾತ್ರಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿರ್ ಹುಸೇನ್ ಸ್ಪಷ್ಟನೆ ನೀಡಿದ್ದಾರೆ. ವಿಜಯೋತ್ಸವದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನನಗೆ ಕೇಳಿಸಿಲ್ಲ. ಒಂದು ವೇಳೆ ಯಾರಾದರೂ ಆ ರೀತಿ ಘೋಷಣೆ ಕೂಗಿದ್ದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಹೇಳಿದ್ದಾರೆ.




























