ಗಲ್ಫ್ ರಾಷ್ಟ್ರದ ಜೈಲುಗಳಲ್ಲಿರುವ 900 ಕೈದಿಗಳನ್ನು ಬಿಡುಗಡೆ ಮಾಡಲು ಭಾರತೀಯ ಮೂಲದ ಉದ್ಯಮಿ ಫಿರೋಜ್ ಮರ್ಚೆಂಟ್ 2.5 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಇವರು ಫ್ಯೂರ್ ಗೋಲ್ಡ್ ಜ್ಯುವೆಲರ್ಸ್ನ ಮಾಲೀಕರಾಗಿದ್ದು, ಈ ವರ್ಷ 3 ಸಾವಿರ ಕೈದಿಗಳನ್ನು ಬಿಡುಗಡೆ ಮಾಡಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಫಿರೋಜ್ ಮರ್ಚೆಂಟ್ ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳಿಗೆ 1 ಮಿಲಿಯನ್ ದಿರ್ಹಮ್ ದೇಣಿಗೆಯಾಗಿ ನೀಡಿದ್ದಾರೆ. ರಂಜಾನ್ ಹಬ್ಬದ ಸಮಯದಲ್ಲಿ ಮಾನವೀಯತೆ, ಕ್ಷಮೆ ಸಂದೇಶ ಸಾರಲು ಫಿರೋಜ್ ಮರ್ಚೆಂಟ್ ಕೈದಿಗಳನ್ನು ಜೈಲಿನಿಂದ ರಿಲೀಸ್ ಮಾಡಲು ದೇಣಿಗೆ ನೀಡಿದ್ದಾರೆ.
ಮಾಹಿತಿಯಂತೆ, ಅಜ್ಮಾನ್ನಿಂದ 495 ಕೈದಿಗಳು, ಫುಜೈರಾದಿಮದ 170, ದುಬೈನಿಂದ 121, ಉಮ್ ಅಲ್ ಕ್ವೈನ್ನಿಂದ 69 ಮತ್ತು 28 ರಾಸ್ ಅಲ್ ಖೈಮಾ ಕೈದಿಗಳನ್ನು ಬಿಡುಗಡೆ ಮಾಡಿಸುತ್ತಿದ್ದಾರೆ.
ಫಿರೋಜ್ ಮರ್ಚೆಂಟ್ ಯಾರು..!?
ಫಿರೋಜ್ ಮರ್ಚೆಂಟ್ 1958ರಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಇವರು ಒಂಭತ್ತು ಮಕ್ಕಳಲ್ಲಿ ಒಬ್ಬರಾಗಿದ್ದರು. ಅವರ ತಂದೆ ಗುಲಾಮ್ ಹುಸೇನ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಆದರೆ ಬರುಬರುತ್ತಾ ತಂದೆ ಉದ್ಯಮ ನೆಲಕಚ್ಚಿತು. ಕೊನೆಗೆ ತಂದೆಯೊಂದಿಗೆ ವ್ಯಾಪಾರದಲ್ಲಿ ಸಹಾಯ ಮಾಡಲು ಫಿರೋಜ್ ಮರ್ಚೆಂಟ್ 11ನೇ ವಯಸ್ಸಿನಲ್ಲಿ ಶಿಕ್ಷಣವನ್ನು ತ್ಯಜಿಸುತ್ತಾರೆ.
ವಿವಾಹದ ಬಳಿಕ ಪತ್ನಿ ರೋಜಿನಾ ಜೊತೆಗೆ ಹನಿಮೂನಿಗಾಗಿ ದುಬೈ ಹೋಗುತ್ತಾರೆ. ಅಲ್ಲಿ ದುಬೈ ಗೋಲ್ಡ್ ಸ್ಟಾಕ್ ನೋಡಿ ಅದರ ವ್ಯಾಪಾರದತ್ತ ಮನಸೋಲುತ್ತಾರೆ. ಬಳಿಕ ದುಬೈನಲ್ಲಿ ನೆಲೆನಿಂತ ಅವರು 1989ರಲ್ಲಿ ತಮ್ಮದೇ ಆದ ಚಿನ್ನ ಮತ್ತು ವಜ್ರದ ವ್ಯಾಪಾರವನ್ನು ಸ್ಥಾಪಿಸುತ್ತಾರೆ. ಸದ್ಯ ಚಿನ್ನದ ವ್ಯಾಪಾರ ಮಾಡುವ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.