ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಎಲ್ಲೆಡೆ ಸಿದ್ಧತೆ ನಡೆದಿದ್ದು ಎಲ್ಲ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡುತ್ತಿವೆ. ಇದರ ಮಧ್ಯೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಒಟ್ಟು 195 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಇದರಲ್ಲಿ 34 ಸಚಿವರ ಹೆಸರುಗಳು ಇವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮತ್ತೆ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.
ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ಹ್ಯಾಟ್ರಿಕ್ ಗೆಲುವು ಪಡೆಯಲು ಸಜ್ಜಾಗಿದ್ದಾರೆ. ಈ ಹಿಂದೆ 2014ರಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ ಅಮೋಘವಾದ ಗೆಲುವು ಪಡೆದಿದ್ದರು. ಮತ್ತೆ 2019ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಗೆಲುವು ಪಡೆದಿದ್ದರು. ಈಗ ಮತ್ತೆ ವಾರಣಾಸಿಯಿಂದ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಮೋದಿ ಇದ್ದಾರೆ. ಆದರೆ ಎದುರಾಳಿಯಾಗೆ ಸ್ಪರ್ಧಿಸುವವರು ಯಾರೆಂದು ಇನ್ನು ಗೊತ್ತಾಗಬೇಕಿದೆ.
ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆಯವರು ಮೊದಲ ಪಟ್ಟಿಯನ್ನು ಘೋಷಣೆ ಮಾಡಿದರು. ಇದರಲ್ಲಿ 195 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಅನೌನ್ಸ್ ಮಾಡಲಾಗಿದೆ. ಇದರಲ್ಲಿ 16 ರಾಜ್ಯ ಹಾಗೂ 2 ಕೇಂದ್ರಾಡಳಿತ ಕ್ಷೇತ್ರದ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಪಟ್ಟಿಯಲ್ಲಿ 34 ಕೇಂದ್ರ ಸಚಿವರ ಹೆಸರಿದ್ದು, 28 ಮಹಿಳೆಯರು ಇದ್ದಾರೆ. ಇನ್ನು 50ಕ್ಕಿಂತ ಕಡಿಮೆ ವಯಸ್ಸಿನ 47 ಅಭ್ಯರ್ಥಿಗಳ ಹೆಸರಿವೆ. 27 ಎಸ್ಸಿ, 18 ಎಸ್ಟಿ ಹಾಗೂ 57 ಒಬಿಸಿ ವರ್ಗದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲಾಗಿದೆ ಎಂದು ತಿಳಿದು ಬಂದಿದೆ.





































