ಮಂಗಳೂರು : ತುಳುನಾಡಿನ ಪುರಾಣ ಪ್ರಸಿದ್ಧ ದೈವಸ್ಥಾನದ ನಿರ್ಮಾಣ ಹಂತದ ಕಟ್ಟಡವನ್ನು ಧ್ವಂಸ ಮಾಡಲಾಗಿದೆ.
ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ, ಬಂಟ, ವೈದ್ಯನಾಥ ದೇವಸ್ಥಾನಕ್ಕೆ ಸೇರಿದ ಕಟ್ಟಡ ಧ್ವಂಸ ಮಾಡಲಾಗಿದೆ.

ಜೆಸಿಬಿ ಮೂಲಕ ರಾತ್ರೋರಾತ್ರಿ ಕಿಡಿಗೇಡಿಗಳು ಈ ಕೃತ್ಯ ವೆಸಗಿದ್ದಾರೆ ಎಂದು ಶಂಕಿಸಲಾಗಿದೆ.
ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನಕ್ಕೆ ನೂತನವಾಗಿ ನಿರ್ಮಿಸುತ್ತಿದ್ದ ನೂತನ ಭಂಡಾರಮನೆ ಸಂಪೂರ್ಣ ಧ್ವಂಸ ಮಾಡಲಾಗಿದೆ.
ದೈವಸ್ಥಾನದ ಆಡಳಿತ ಮಂಡಳಿ ವಿವಾದದ ಸಂಘರ್ಷದಲ್ಲಿ ಕಟ್ಟಡ ಧ್ವಂಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಎರಡು ಬಣಗಳ ಗುದ್ದಾಟದಲ್ಲಿ ದೈವಸ್ಥಾನಕ್ಕೆ ಸೇರಿದ ಕಟ್ಟಡ ಧ್ವಂಸ ಮಾಡಿರೋ ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿದ್ದಾರೆ.
ಭಾರೀ ಸಂಖ್ಯೆಯಲ್ಲಿ ದೈವಸ್ಥಾನದ ಭಕ್ತರು ಜಮಾವಣೆಗೊಂಡಿದ್ದು, ಈ ಹಿನ್ನೆಲೆ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.
ಉಳ್ಳಾಲ ಪೊಲೀಸರು ಸೇರಿ ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ. ಸದ್ಯ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸೇರುವ ಕೊಂಡಾಣ ದೈವಸ್ಥಾನ., ಸದ್ಯ ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಭಂಡಾರಮನೆ ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದೆ. ಅದರಲ್ಲಿ ಕ್ಷೇತ್ರದ ದೈವಗಳ ಹದಿನೈದು ಕೋಟಿಗೂ ಮಿಕ್ಕಿ ಬೆಲೆಬಾಳುವ ಒಡವೆಗಳಿವೆ. ಆದರೆ ಭಂಡಾರಮನೆಯನ್ನ ಮುಜರಾಯಿ ಇಲಾಖೆಗೆ ಸೇರಿಸಲು ಹಲವರಿಂದ ಯತ್ನ ನಡೆದಿತ್ತು.
ಖಾಸಗಿ ಭಂಡಾರ ಮನೆಯವರು ಸಮ್ಮತಿ ನೀಡಿರಲಿಲ್ಲ. ಆ ಹಿನ್ನಲೆ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣಕ್ಕೆ ವ್ಯವಸ್ಥಾಪನಾ ಸಮಿತಿ ಮುಂದಾಗಿತ್ತು. ದೈವಸ್ಥಾನದ ಪಕ್ಕದ ಜಾಗದಲ್ಲಿ ಕಳೆದ ಜನವರಿ 8 ರಂದು ನೂತನ ಭಂಡಾರ ಮನೆ ಶಿಲನ್ಯಾಸ ಮಾಡಲಾಗಿತ್ತು. ಆಗಿನ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಮುಂದಾಳುತ್ವದಲ್ಲಿ ಶಿಲಾನ್ಯಾಸ ಕಾರ್ಯ ನಡೆದಿತ್ತು.
ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ ಎಂಭತ್ತು ಶೇಕಡಾ ಕಾಮಗಾರಿ ಪೂರ್ಣಗೊಂಡಿತ್ತು. ಈ ಮಧ್ಯೆ ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದ ಹಿನ್ನೆಲೆ ಅಧಿಕಾರ ಹಸ್ತಾಂತರ ಮಾಡಲಾಗಿತ್ತು. ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಎರಡು ದಿವಸಗಳ ಹಿಂದಷ್ಟೇ ಅಧಿಕಾರವನ್ನ ಇಲಾಖೆಗೆ ಹಸ್ತಾಂತರಿಸಿದ್ದರು.
ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ ಎಂದು ಶಂಕಿಸಲಾಗಿದೆ.
ಜೆಸಿಬಿಯಿಂದ ಏಕಾಏಕಿ ನಿರ್ಮಾಣ ಹಂತದ ಭಂಡಾರ ಮನೆ ನೆಲಸಮ ಮಾಡಲಾಗಿದೆ.
ಸದ್ಯ ಘಟನೆ ಬೆನ್ನಲ್ಲೇ ಎರಡು ಬಣಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಕಾರ್ಣಿಕ ದೈವದ ಕೋಟ್ಯಾಂತರ ರೂ. ಒಡವೆಗಳ ಅಧಿಪತ್ಯಕ್ಕಾಗಿ ಸಂಘರ್ಷ ನಡೆಯುತ್ತಿದೆನ್ನಲಾಗಿದೆ.
ನೂರಾರು ವರ್ಷಗಳಿಂದ ಮುತ್ತಣ್ಣ ಶೆಟ್ಟಿ ಕುಟುಂಬಸ್ಥರ ಸುಪರ್ದಿಯಲ್ಲೇ ಒಡವೆಗಳಿವೆ. ದೈವಗಳ ನೇಮೋತ್ಸವದ ದಿನ ದೈವ ಸ್ಥಾನಕ್ಕೆ ತಂದು ನೇಮೋತ್ಸವ ನಡೆಸಲಾಗುತ್ತದೆ. ಆದರೆ ಇದೀಗ ಬಣ ಗುದ್ದಾಟಕ್ಕೆ ದೈವಸ್ಥಾನದಲ್ಲಿ ವಿವಾದ ಎದ್ದಿದೆ.
ದೈವಗಳ ಸಮ್ಮುಖದಲ್ಲಿ ಬಗೆ ಹರಿಯ ಬೇಕಾದ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

























