ಕಡಬ : ಕಾಲೇಜು ಆವರಣದೊಳಗೆ ನುಗ್ಗಿದ ಯುವಕನೋರ್ವ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಸಲೀನ್ ಕೆ.ಪಿ. ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮಾ.4 ರಂದು ಬೆಳಿಗ್ಗೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದು, ವಿದ್ಯಾರ್ಥಿಗಳು ಹೊರಭಾಗದಲ್ಲಿ ಪರೀಕ್ಷೆಗಾಗಿ ತಯಾರಾಗುತ್ತಿರುತ್ತಾರೆ. ಈ ವೇಳೆ ಕಾಲೇಜಿನ ಸಮವಸ್ತ್ರ ಧರಿಸಿದ್ದ ಯುವಕನೋರ್ವ ಮೂವರು ವಿಧ್ಯಾರ್ಥಿನಿಯರು ಇದ್ದಲ್ಲಿಗೆ ತೆರಳಿ, ಬಾಟಲಿಯೊಂದರಲ್ಲಿ ತಂದಿದ್ದ ದ್ರಾವಣವನ್ನು ಅವರ ಕಡೆ ಎರಚಿರುತ್ತಾನೆ. ಕೂಡಲೇ ವಿಧ್ಯಾರ್ಥಿನಿಯರು ಕಿರುಚಿಕೊಂಡಿದ್ದು, ಈ ವೇಳೆ ಓಡಿಹೋಗುತ್ತಿದ್ದ ಯುವಕನನ್ನು ಕಾಲೇಜಿನ ವಿದ್ಯಾರ್ಥಿಗಳು ಬೆನ್ನಟ್ಟಿ ಹಿಡಿದಿರುತ್ತಾರೆ.
ದೇಹದ ಕೆಲವು ಕಡೆ ಸುಟ್ಟಗಾಯಗಳಾಗಿದ್ದ ಮೂವರು ವಿಧ್ಯಾರ್ಥಿನಿಯರನ್ನು ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದಾಗ, ಸದ್ರಿ ವಿದ್ಯಾರ್ಥಿನಿಯರ ಮೇಲೆ ಯುವಕನು ಎರಚಿರುವ ದ್ರಾವಣ ಆ್ಯಸಿಡ್ ಎಂಬುದಾಗಿ ತಿಳಿದುಬಂದಿರುತ್ತದೆ. ಬಳಿಕ ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಆ್ಯಸಿಡ್ ಎರಚಿದ ಯುವಕನನ್ನು ಕೇರಳ ವ್ಹಾಯ್ ಕಡವ್ ನಿವಾಸಿ ಅಬಿನ್ ಸಿಬಿ (22) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 31/2024 ಕಲಂ:447,326(ಎ) 307 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ವಿಚಾರಣೆಗಾಗಿ ಕಡಬ ಪೊಲೀಸರು ವಶಕ್ಕೆ ಪಡೆದಿರುತ್ತಾರೆ.
ಪೊಲೀಸ್ ಅಧೀಕ್ಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖೆಯ ಬಗ್ಗೆ ಮಾರ್ಗದರ್ಶನ ನೀಡಿರುತ್ತಾರೆ.

























