ಇಸ್ರೇಲ್ ಅನ್ನು ಟಾರ್ಗೆಟ್ ಮಾಡಿ ಲೆಬನಾನ್ ದೇಶದಿಂದ ಉಡಾವಣೆ ಮಾಡಿದ ಮಿಸೈಲ್ ದಾಳಿಯಲ್ಲಿ ಕೇರಳ ಮೂಲದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು,ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೇಸ್ತಿನ್ ನಡುವಿನ ಯುದ್ಧದ ಕಾರ್ಮೋಡ ಇನ್ನು ಬೂದಿ ಮುಚ್ಚಿದ ಕೆಂಡದಂತಿದೆ.
ಇಸ್ರೇಲ್ನಲ್ಲಿ ಮಿಸೈಲ್ ದಾಳಿಯಿಂದ ಕೇರಳ ಮೂಲದ ಕೊಲ್ಲಂ ಜಿಲ್ಲೆಯ ಪಟ್ನಿಬಿನ್ ಮ್ಯಾಕ್ಸ್‌ವೆಲ್ ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರ ಪಾರ್ಥಿವ ಶರೀರವನ್ನು ಜಿವ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕೇರಳದಲ್ಲಿದ್ದ ಅವರ ಪತ್ನಿ ಸದ್ಯ 2ನೇ ಮಗುವಿನ ನಿರೀಕ್ಷೆಯಲ್ಲಿದ್ದು 7 ತಿಂಗಳ ಗರ್ಭಿಣಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಉತ್ತರ ಇಸ್ರೇಲ್ನ ಮಾರ್ಗಲಿಯೊಟ್ ಪ್ರದೇಶದಲ್ಲಿ ಹಣ್ಣಿನ ತೋಟದಲ್ಲಿ ಕೇರಳ ವ್ಯಕ್ತಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಲೆಬನಾನ್ ದೇಶದಿಂದ ಉಡಾಯಿಸಿದ್ದ ಮಿಸೈಲ್ ನೇರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೇಲೆ ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ ಇಬ್ಬರು ಗಾಯಗೊಂಡಿದ್ದಾರೆ ಎಂದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಕೆಲ ತಿಂಗಳಗಳ ಹಿಂದೆ ಇಸ್ರೇಲ್ ಮತ್ತು ಪ್ಯಾಲೇಸ್ತಿನ್ ನಡುವೆ ಭೀಕರ ಯುದ್ಧ ನಡೆದಿತ್ತು. ಈ ವೇಳೆ ಇಸ್ರೇಲ್ ನಿರಂತರವಾಗಿ ಗಾಜಾ ಪಟ್ಟಿಯ ಮೇಲೆ ಬಾಂಬ್ ಹಾಗೂ ಕ್ಷಿಪಣಿಗಳನ್ನು ಉಡಾಯಿಸಿ ಸಾಕಷ್ಟು ಜನರ ಸಾವುನೋವಿಗೆ ಕಾರಣವಾಗಿತ್ತು. ಇಷ್ಟೇ ಅಲ್ಲದೇ ಪ್ಯಾಲೇಸ್ತಿನ್ ಕೂಡ ಪ್ರತ್ಯುತ್ತರವಾಗಿ ಇಸ್ರೇಲ್ ಮೇಲೆ ಬಾಂಬ್ ದಾಳಿ ಹಾಗೂ ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಸದ್ಯ ಉಡಾವಣೆ ಮಾಡಲಾದ ಕ್ಷಿಪಣೆ ಲೆಬನಾನ್ನಿಂದ ಬಂದಿರುವುದು ಆಶ್ಚರ್ಯ ಮೂಡಿಸಿದೆ.


























