ನವದೆಹಲಿ : ಲೋಕಸಭಾ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಈಗಾಗಲೇ ಮೊದಲ ಸುತ್ತಿನ ಟಿಕೆಟ್ ಹಂಚಿಕೆಯನ್ನೂ ಮುಗಿಸಿರೋ ಕಮಲಪಡೆ, ಸೆಕೆಂಡ್ ಇನ್ನಿಂಗ್ಸ್ನತ್ತ ಗಮನಹರಿಸಿದೆ. ಟಿಕೆಟ್ ಹಂಚಿಕೆ ದೃಷ್ಟಿಯಿಂದ ಇಂದು ಬಿಜೆಪಿ ಹಿರಿಯ ನಾಯಕರ ಸಭೆ ನಡೆಯಲಿದೆ. ಇಂಪಾರ್ಟೆಂಟ್ ವಿಚಾರ ಅಂದ್ರೆ ಕರ್ನಾಟಕದ ಟಿಕೆಟ್ ಹಂಚಿಕೆಯೇ ಇವತ್ತಿನ ಪ್ರಮುಖ ಚರ್ಚೆ.
ಅಬ್ ಕಿ ಬಾರ್ ಚಾರ್ ಸೋ ಪಾರ್.. ಇದು ಬಿಜೆಪಿಯ ಈ ಬಾರಿಯ ಚುನಾವಣಾ ಪ್ರಚಾರದ ಪ್ರಮುಖ ಘೋಷಣೆ. ಇತ್ತ ಎಲೆಕ್ಷನ್ಗೆ ಮುಹೂರ್ತ ಫಿಕ್ಸ್ ಮಾಡೋ ಮೊದಲೇ ಬಿಜೆಪಿ, ರಣಕಹಳೆ ಮೊಳಗಿಸಿದೆ. ಅಖಾಡಕ್ಕೆ ತನ್ನ ರಣಕಲಿಗಳನ್ನ ಇಳಿಸಿದೆ. 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೂ ರಿಲೀಸ್ ಮಾಡಿದೆ.
ಮೊದಲ ಪಟ್ಟಿಯನ್ನ ರಿಲೀಸ್ ಮಾಡಿ ಕಮಾಲ್ ಮಾಡಿದ್ದ ಕಮಲ, ಫಸ್ಟ್ ಲಿಸ್ಟ್ನಿಂದ ಕರ್ನಾಟಕ ಸೇರಿ ಪ್ರಮುಖ 5-6 ರಾಜ್ಯಗಳನ್ನ ಪೆಂಡಿಂಗ್ ಇರಿಸಿತ್ತು. ಗೊಂದಲ ಇರುವಲ್ಲಿ ಕಾದುನೋಡೋ ತಂತ್ರ ಅನುಸರಿಸಿತ್ತು. ಈ ಗೊಂದಲ ಇರುವ ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡೋದಕ್ಕೆ ಇದೀಗ ಮತ್ತೊಮ್ಮೆ ಸಭೆ ನಡೆಸಲು ಕಮಲಪಡೆ ಸಜ್ಜಾಗಿದೆ.
ಟಿಕೆಟ್ ಹಂಚಿಕೆಯ ಸೆಕೆಂಡ್ ಇನ್ನಿಂಗ್ಸ್ಗೆ ಬಿಜೆಪಿ ಬಿಗ್ ಪ್ಲಾನ್
ಮೊದಲ ಪಟ್ಟಿಯಲ್ಲಿ 16 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಟಿಕೆಟ್ ಹಂಚಿಕೆ ಮಾಡಿರೋ ಬಿಜೆಪಿ, ಇಂದು ಮತ್ತೊಮ್ಮೆ ಸಭೆ ನಡೆಸಲು ಸಜ್ಜಾಗಿದೆ. ಎರಡನೇ ಸುತ್ತಿನ ಟಿಕೆಟ್ ಹಂಚಿಕೆಯ ವೇಳೆ ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೂ ಟಿಕೆಟ್ ಹಂಚಿಕೆ ಫೈನಲ್ ಆಗಲಿದೆ. ಇದಕ್ಕಾಗಿ ಈಗಾಗಲೇ ಬೆಳಗಾವಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿರುವ ಬಿಜೆಪಿಯ ನಾಯಕರು ಬಹುತೇಕ ರಾಜ್ಯದ ನಾಯಕರ ಅಭಿಪ್ರಾಯವನ್ನು ಸಂಗ್ರಹ ಮಾಡಿದೆ.
ಈ ಬಾರಿ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲಲು ಸಕಲ ರೀತಿಯ ತಯಾರಿ ಬಿಜೆಪಿ ಮಾಡಿಕೊಳ್ತಿದೆ. ಅದಕ್ಕಾಗಿ ಒಂದಷ್ಟು ಬದಲಾವಣೆಗೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಬೇರೆ ರಾಜ್ಯಗಳಲ್ಲಿ ಮೊದಲ ಪಟ್ಟಿಯಲ್ಲಿ ಹಲವು ಹಾಲಿ ಸಚಿವರಿಗೆ ಮತ್ತು ಸಂಸದರಿಗೆ ಕೊಕ್ ನೀಡಿರೋ ಬಿಜೆಪಿ, ಕರ್ನಾಟಕದಲ್ಲೂ ಬಹಳಷ್ಟು ಹಿರಿಯ ನಾಯಕರಿಗೆ ವಯಸ್ಸಿನ ಕಾರಣ ನೀಡಿ ಟಿಕೆಟ್ ತಪ್ಪಿಸೋ ಸಾಧ್ಯತೆ ಇದೆ.
ರಾಜ್ಯದಲ್ಲಿ ಒಂದಷ್ಟು ಬದಲಾವಣೆಗೆ ಬಿಜೆಪಿ ಸಜ್ಜಾಗಿದೆ. ಹಾವೇರಿ ಸಂಸದ ಶಿವಕುಮಾರ್ ಉದಾಸಿ ತಾವೇ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಅಲ್ಲಿ ಹೊಸ ಮುಖದ ಹುಡುಕಾಟದಲ್ಲಿ ಬಿಜೆಪಿ ಇದೆ. ಇನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದಲು ಸಂಸದ ಬಸವರಾಜ್ ಹಿಂದೆ ಸರಿದಿದ್ದಾರೆ. ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಯಾಗೋ ಸಾಧ್ಯತೆ ಇದೆ. ಈ ಸಂಬಂಧ ಕೆಲವರ ಅಭಿಪ್ರಾಯವನ್ನ ಹೈಕಮಾಡ್ ಆಲಿಸಲಾಗಿದ್ದು, ಇದನ್ನ ಇಂದಿನ ಸಭೆಯಲ್ಲಿ ಚರ್ಚಿಸಲಿದ್ದಾರೆ.
ಸಂಜೆ 5:00 ಗಂಟೆಗೆ ಜೆ.ಪಿ ನಡ್ಡಾ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದೆ. ಇದರಲ್ಲಿ ರಾಜ್ಯದಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಎಲ್ ಸಂತೋಷ್, ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ. ಬಹುತೇಕ ಇಂದಿನ ಸಭೆಯಲ್ಲಿ ಅಂತಿಮ ಹೆಸರು ನಿರ್ಧಾರವಾಗಲಿದೆ.
ಇಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನ 8ನೇ ತಾರೀಖಿನಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ, ಬಿಜೆಪಿ ಚುನಾವಣಾ ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸಲಾಗುತ್ತೆ. ಅಂದು ಯಾರಿಗೆ ಟಿಕೆಟ್ ಅನ್ನೋದು ಫೈನಲ್ ಆಗಲಿದೆ. ಹೀಗಾಗಿ ಈಗಾಗಲೇ ಬಿಜೆಪಿಯ ಹಲವು ನಾಯಕರ ಎದೆಯಲ್ಲಿ ಢವಢವ ಶುರುವಾಗಿದ್ದು, ಹಲವು ಸಂಸದರ ಚಿತ್ತ ದೆಹಲಿಯ ಸಭೆಯುತ್ತ ನೆಟ್ಟಿದೆ.


























