ಬೆಂಗಳೂರು : ಬಾಂಬ್ ಸ್ಫೋಟ ಸಂಭವಿಸಿದ ನಂತರ ವಾರದ ಬಳಿಕ ಇದೀಗ ಬೆಂಗಳೂರಿನ ರಾಮೇಶ್ವರಂ ಕೆಫೆ ಮತ್ತೆ ಕಾರ್ಯಾರಂಭ ಮಾಡಿದೆ.
ಶಿವರಾತ್ರಿ ದಿನವೇ ಕೆಫೆ ಪುನರಾರಂಭ ಮಾಡುವುದಾಗಿ ಮ್ಯಾನೇಜ್ಮೆಂಟ್ ಈಗಾಗಲೇ ತಿಳಿಸಿತ್ತು. ಅದರಂತೆ ಶುಕ್ರವಾರ ಬೆಳಿಗ್ಗೆಯೇ ಕೆಫೆ ಪುನರಾರಂಭ ಮಾಡಿದೆ.
ಕೆಫೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ಆ ಮೂಲಕ ಮತ್ತೆ ಗ್ರಾಹಕರಿಗೆ ಕೆಫೆ ಮುಕ್ತವಾಗಿದೆ.
ಹೇಗಿದೆ ಭದ್ರತಾ ವ್ಯವಸ್ಥೆ..!?
ಬಾಂಬ್ ಸ್ಫೋಟದ ಘಟನೆಯಿಂದ ಎಚ್ಚೆತ್ತುಕೊಂಡಿರುವ ರಾಮೇಶ್ವರಂ ಕೆಫೆ ಇದೀಗ ಪುನರಾರಂಭದ ವೇಳೆ ಸೂಕ್ತ ಮುನ್ನೆಚ್ಚರಿಕೆ, ಭದ್ರತಾ ಕ್ರಮಗಳನ್ನು ಕೈಗೊಂಡಿದೆ.
ಕೆಫೆಯ ಪ್ರವೇಶ ದ್ವಾರದ ಬಳಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಶನಿವಾರದಿಂದ ಪ್ರತಿ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿಯೇ ಒಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಕೆಫೆ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ಮಧ್ಯೆ, ಪೊಲೀಸ್ ಪಹರೆಯಲ್ಲೇ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಶುಕ್ರವಾರ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಘಟನೆ ಸಂಬಂಧ ತನಿಖೆಯೂ ಪ್ರಗತಿಯಲ್ಲಿದೆ.
ಈ ಮಧ್ಯೆ, ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಚುರೂಪಿಸಿದ ಅನುಮಾನದ ಮೇಲೆ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ನನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈತ ಜೈಲಿನಲ್ಲೇ ಕುಳಿತುಕೊಂಡು ಸಂಚು ಹೂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ, ಬೆಂಗಳೂರಿನ ಇತರ ಹೋಟೆಲ್ಗಳಲ್ಲಿಯೂ ಭದ್ರತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಹೋಟೆಲ್ ಸಂಘ ಚಿಂತನೆ ನಡೆಸಿತ್ತು. ಮೆಟಲ್ ಡಿಟೆಕ್ಟರ್ಗಳ ಅಳವಡಿಕೆ, ಗ್ರಾಹಕರಿಗೆ ಬ್ಯಾಗುಗಳನ್ನು ಹೊರಗೆ ಬಿಟ್ಟು ಬರುವಂತೆ ಸೂಚನೆ ನೀಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೋಟೆಲ್ ಸಂಘದ ಸಭೆಯಲ್ಲಿ ಸಮಲೋಚನೆ ನಡೆಸಲಾಗಿತ್ತು. ಇದೀಗ ರಾಮೇಶ್ವರಂ ಕೆಫೆ ಮಾತ್ರ ಪುನರಾರಂಭದ ವೇಳೆ ಮೆಟಲ್ ಡಿಟೆಕ್ಟರ್ ಅಳವಡಿಸಿದೆ. ಭದ್ರತಾ ತಪಾಸಣೆಯ್ನೂ ಆರಂಭಿಸಿದೆ.


























