ಪುತ್ತೂರು : ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ‘ಕರ್ನಾಟಕ ಪೊಲೀಸ್ ರನ್-2024’ ಕಾರ್ಯಕ್ರಮ ಮಾ.10 ರಂದು ಪುತ್ತೂರಿನಲ್ಲಿ ನಡೆಯಲಿದೆ.
ಡ್ರಗ್ಸ್ ಹಾಗೂ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಡೆಯುತ್ತಿರುವ ಪ್ರಯತ್ನಗಳ ಮುಂದುವರಿದ ಭಾಗವಾಗಿ ಹಾಗೂ ಕರ್ನಾಟಕ ರಾಜ್ಯ ಪೊಲೀಸರ ಸುವರ್ಣ ಮಹೋತ್ಸವದ ಅಂಗವಾಗಿ ಮಾ.10 ರಂದು ಕರ್ನಾಟಕ ಪೊಲೀಸ್ ರನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪುತ್ತೂರು ವಿಭಾಗ ಪೊಲೀಸ್ ಉಪಾಧೀಕ್ಷಕರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕರೊಂದಿಗೆ ಸಹಭಾಗಿತ್ವದಲ್ಲಿ ಪುತ್ತೂರು ನಗರ ವ್ಯಾಪ್ತಿಯಲ್ಲಿ 5 ಕಿ.ಮೀ ಅಥವಾ 10 ಕಿ.ಮೀ ದೂರಕ್ಕೆ ‘ಕರ್ನಾಟಕ ಪೊಲೀಸ್ ರನ್’ ಓಟ ಕಾರ್ಯಕ್ರಮವನ್ನು ಆಯೋಜಿಸುವುದು ಹಾಗೂ ಸದ್ರಿ ಓಟದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಮಾದಕ ದ್ರವ್ಯ ಮುಕ್ತ ಕರ್ನಾಟಕ ಎಂಬ ಅಂಶದ ಬಗ್ಗೆ ಹೆಚ್ಚು ಪ್ರಚಾರ ಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

























