ಬಂಟ್ವಾಳ : ಕಾನೂನು ಬಾಹಿರವಾಗಿ ಆಟೋರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೊಲೀಸರು ತಡೆದು ದಂಡ ಹಾಕಿದರು ಎಂಬ ಕಾರಣಕ್ಕೆ ಆವೇಶಕ್ಕೊಳಗಾದ ಚಾಲಕ ಟ್ರಾಫಿಕ್ ಎಸ್.ಐ. ಹಾಗೂ ಸರಕಾರಿ ವಾಹನಕ್ಕೆ ಮತ್ತು ಆಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ದಕ್ಷಿಣ ಕನ್ನಡದ ಬಂಟ್ವಾಳ ಬಿಸಿರೋಡಿನ ಕೈಕಂಬ ಎಂಬಲ್ಲಿ ನಡೆದಿದ್ದು, ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಖಂಡಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಎದುರೇ ಈ ರೀತಿ ಅನುಚಿತವಾಗಿ ವರ್ತಿಸಿದರೆ ಸಾರ್ವಜನಿಕ ಪಾಡೇನು ಎಂದು ಹಿಂದೂ ಜಾಗರಣ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸಾರ್ವಜನಿಕವಾಗಿ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಅನಾಹುತಕ್ಕೆ ಕಾರಣನಾದ ಆಟೋ ಚಾಲಕನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.



























