ಬಂಟ್ವಾಳ : ಕಾನೂನು ಬಾಹಿರವಾಗಿ ಆಟೋರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ತಡೆದು ದಂಡ ಹಾಕಿದರು ಎಂಬ ಕಾರಣಕ್ಕೆ ಆವೇಶಕ್ಕೊಳಗಾದ ಚಾಲಕ ಸರಕಾರಿ ವಾಹನಕ್ಕೆ ಮತ್ತು ಆಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಮೀಪದ ಕೈಕಂಬ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.11 ರಂದು ಬೆಳಿಗ್ಗೆ, ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸುತೇಶ್ ಕೆ.ಪಿ ರವರು, ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಬಿ. ಮೂಡಾ ಗ್ರಾಮದ ಕೈಕಂಬ ಜಂಕ್ಷನ್ ಬಳಿ, ಸಂಚಾರ ನಿಯಂತ್ರಣ ಮತ್ತು ವಾಹನ ತಪಾಸಣೆ ಮಾಡುತ್ತಿದ್ದಾಗ, ಬಂಟ್ವಾಳ ಗೂಡಿನ ಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಎಂಬಾತ ಆಟೋರಿಕ್ಷಾದಲ್ಲಿ ಚಾಲಕನಾಗಿ, ಸಮವಸ್ತ್ರ ಧರಿಸದೇ ಹಾಗೂ ಮೊಬೈಲ್ ಫೋನ್ ಬಳಸಿಕೊಂಡು, ರಿಕ್ಷಾ ಚಲಾಯಿಸಿಕೊಂಡು ಬಂದಿದ್ದು, ಸದ್ರಿಯವರು ಆಟೋರಿಕ್ಷಾವನ್ನು ನಿಲ್ಲಿಸಿ, ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ತಿಳಿಸಿರುತ್ತಾರೆ.
ಈ ವೇಳೆ ಆಟೋರಿಕ್ಷಾ ಚಾಲಕನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಸದ್ರಿ ಚಾಲಕನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿರುವುದಕ್ಕಾಗಿ ದಂಡವನ್ನು ಪಾವತಿಸುವಂತೆ ಸೂಚಿಸಿದಾಗ, ದಂಡ ಪಾವತಿ ಮಾಡಲು ಹಣವಿಲ್ಲ ಎಂದು ತಿಳಿಸಿದ ಕಾರಣ ಚಾಲಕನ ಚಾಲನಾ ಪರವಾನಿಗೆ ಹಾಗೂ ವಾಹನದ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿರುತ್ತಾರೆ.
ಅನ್ಸಾರ್ ಬಳಿ ಯಾವುದೇ ದಾಖಲೆಗಳು ಇಲ್ಲವೆಂದು ತಿಳಿಸಿದ ಮೇರೆಗೆ, ಆತನಿಗೆ ನೋಟೀಸ್ ನೀಡಿ ಸಹಿಯನ್ನು ಪಡೆದು ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಸದ್ರಿ ಆಟೋ ಚಾಲಕ ದಂಡದ ಹಣ ಮತ್ತು ದಾಖಲಾತಿ ತರುವುದಾಗಿ ಹೇಳಿ ಅಲ್ಲಿಂದ ಹೋಗಿದ್ದು, ಸ್ವಲ್ಪ ಸಮಯದ ಬಳಿಕ ವಾಪಾಸು ಬಂದು, ಆಟೋ ರಿಕ್ಷಾ ಸೀಝ್ ಮಾಡಿರುವ ಬಗ್ಗೆ ತಕರಾರು ತೆಗೆದು, ಉಪನಿರೀಕ್ಷಕರ ಇಲಾಖಾ ವಾಹನಕ್ಕೆ ಮತ್ತು ಆಟೋರಿಕ್ಷಾಕ್ಕೆ ಪ್ಲಾಸ್ಟಿಕ್ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲಿಯಂ ಉತ್ಪನ್ನವನ್ನು ಎರಚಿ, ಬೆಂಕಿ ಹಚ್ಚಲು ಪ್ರಯತ್ನಿಸಿದ್ದು, ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಆತನನ್ನು ತಡೆದು, ಆತನನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ, ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 53/2024 ಕಲಂ : 308.353,ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























