ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಚಿವ ಎಸ್ ಅಂಗಾರ ಇಂದು ಭೇಟಿ ನೀಡಿದ್ದು ಈ ಸಂದರ್ಭ ದೇವಸ್ಥಾನದ ವತಿಯಿಂದ ಹೊಸದಾಗಿ ಖರೀದಿಸಿದ ಮೂರು ಅಂಬ್ಯುಲೆನ್ಸ್ ಗಳ ಲೋಕಾರ್ಪಣೆ ಮಾಡಲಾಯಿತು.
ಅಲ್ಲದೆ ಕಡಬ ಮತ್ತು ಸುಳ್ಯ ತಾಲೂಕಿನ ಸಿ ಕ್ಲಾಸ್ ದೇವಸ್ಥಾನಗಳ ನೌಕರರಿಗೆ ಆಹಾರ ಕಿಟ್ ವಿತರಣಾ ಕಾರ್ಯ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಸಚಿವರು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶವಾದ ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಳ್ಪ, ಏನೆಕಲ್ಲು ಭಾಗದ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಅನುಕೂಲಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಏಳು ಆಂಬುಲೆನ್ಸ್ ಗಳನ್ನೂ ವ್ಯವಸ್ಥೆ ಮಾಡಲಾಗುತ್ತಿದೆ.
ಇಂದು ಮೂರು ಅಂಬ್ಯುಲೆನ್ಸ್ ಲೋಕಾರ್ಪಣೆಗೊಂಡಿದ್ದು ಅದು ಸುಳ್ಯ, ಬೆಳ್ಳಾರೆ, ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಚರಿಸಲಿದೆ ಎಂದರು. ಧಾರ್ಮಿಕ ಇಲಾಖೆಗೆ ಸಂಬಂಧ ಪಟ್ಟ ದೇವಸ್ಥಾನದ ಸಿ.ಗ್ರೂಪ್ ನೌಕರರಿಗೆ ಅಕ್ಕಿ, ಬೇಳೆಕಾಳು, ಎಣ್ಣೆ ಒಳಗೊಂಡ ಆಹಾರ ಕಿಟ್ಟನ್ನು ವಿತರಿಸಲಾಗುತ್ತಿದೆ ಎಂದರು. ಕೊರೊನಾ ಹಬ್ಬುವುದನ್ನು ತಡೆಯುವ ದೃಷ್ಟಿ ಯಿಂದ ಜಿಲ್ಲಾಧಿಕಾರಿಯವರು ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರಲ್ಲದೆ ಅಲ್ಲಲ್ಲಿ ಕ್ವಾರಂಟೈನ್ ಕೇಂದ್ರಗಳು ತೆರೆಯಲಿದ್ದೇವೆ, ಯಾರು ಮನೆಯಲ್ಲಿ ಕ್ವಾರಂಟೈನ್ ಆಗುವ ಹಾಗಿಲ್ಲ ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುತ್ತೇವೆ, ಅಗತ್ಯ ಬಿದ್ದರೆ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಕ್ವಾರಂಟೈನ್ ಕೇಂದ್ರ ವನ್ನು ತೆರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ತಹಶೀಲ್ದಾರ್ ಅನಿತಾಲಕ್ಷ್ಮೀ, ವ್ಯವಸ್ಥಾಪನಾ ಸಮಿತಿಯ ಪ್ರಸನ್ನ ದರ್ಬೆ, ವನಜಾ ಭಟ್, ಶೋಭಾ ಗಿರಿಧರ್, ಸ್ಥಳೀಯ ನಾಯಕರುಗಳಾದ ಗಿರಿಧರ ಸ್ಕಂದ, ರಾಜೇಶ್ ಎನ್ ಎಸ್, ಸವಿತಾ ಭಟ್, ದಿನೇಶ್ ರಾವ್, ದೇವಸ್ಥಾನದ ನೌಕರರು ಉಪಸ್ಥಿತರಿದ್ದರು.