ಶಿರಾಡಿ : ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆಯಾಗುತ್ತಿರುವ ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶಿರಾಡಿಘಾಟ್ ರಸ್ತೆಯ ಡಬಲ್ ಕ್ರಾಸ್ ಬಳಿ ನಡೆದಿದೆ.

ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಗ್ಯಾಸ್ ಸೋರಿಕೆಯಾಗುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ಆಗಮಿಸಿದ್ದು, ಮಂಗಳೂರಿನ ಎಮ್.ಆರ್.ಪಿ.ಎಲ್ ನಿಂದ ತಜ್ಞರ ತಂಡ ಆಗಮಿಸಬೇಕಾಗಿದೆ.
ಮಂಗಳೂರು ಧರ್ಮಸ್ಥಳಕ್ಕೆ ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ.
ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ತೆರಳುವವರು ಗುಂಡ್ಯ-ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ.
ಪಲ್ಟಿಯಾದ ಗ್ಯಾಸ್ ಟ್ಯಾಂಕರ್ನಿಂದ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು, ಟ್ಯಾಂಕರ್ ತೆರವು ಕಾರ್ಯಾಚರಣೆ ಮುಗಿಯುವವರೆಗೂ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ ಎಂದು ವರದಿಯಾಗಿದೆ.


























