ಪುತ್ತೂರು : ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಗೈದ ಘಟನೆ ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಘಟನೆ ಮಾ.13 ರಂದು ನಡೆದಿದ್ದು, ಯುವತಿ ದೂರು ನೀಡಿದ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಾಮಂಜೂರು ಮೂಲದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕವಿದ್ದು, ಆಕೆಯ ಕೋರಿಕೆಯಂತೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ ಎನ್ನಲಾಗಿದೆ.
ಯುವಕನ ಸ್ನೇಹಿತರಾದ ಕರ್ವೇಲು ಮತ್ತು ಕಡೇಶಿವಾಲಯದ ಇಬ್ಬರು ಇದನ್ನು ದುರುಪಯೋಗಪಡಿಸಿಕೊಂಡು ವಾಮಂಜೂರಿನ ಆತನ ಸ್ನೇಹಿತೆಯ ನಂಬರ್ ಪಡೆದು ಆಕೆಗೆ ಉದ್ಯೋಗ ಕೊಡಿಸುವುದಾಗಿ ಪುತ್ತೂರಿಗೆ ಕರೆಸಿದ್ದರು.
ಯುವತಿಯು ತನ್ನ ಸ್ನೇಹಿತೆಯ ಜೊತೆಗೆ ಮಾ.13 ರಂದು ಪುತ್ತೂರಿಗೆ ಬಂದಾಗ ಕರ್ವೇಲು ಮತ್ತು ಕಡೇಶಿವಾಲಯದ ಆಪಾದಿತ ಯುವಕರಿಬ್ಬರು ಆಕೆಗೆ ಪೊಫೈಲ್ ಬರೆಯಲೆಂದು ಹೇಳಿ ಆಕೆಯನ್ನು ಬನ್ನೂರು ಗ್ರಾಮದ ಬನ್ನೂರು ಬೈಲು ಬಳಿಯ ನಿರ್ಜನ ಮನೆಯೊಂದಕ್ಕೆ ಕರೆದೊಯ್ದರು. ಅಲ್ಲಿ ಒಬ್ಬಾಕೆ ಯುವತಿಯನ್ನು ಹೊರಗೆ ಕುಳ್ಳಿರಿಸಿ ಇನ್ನೋರ್ವ ಯುವತಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ.
ಘಟನೆಯ ಬಳಿಕ ಆರೋಪಿ ಯುವಕರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದು, ಸಂತ್ರಸ್ತೆ ಯುವತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಪುತ್ತೂರು ಮಹಿಳಾ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಆರೋಪಿಗಳನ್ನು 24 ಗಂಟೆಯೊಳಗೆ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

























