ಪುತ್ತೂರು : ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಸೇರ್ಪಡೆಗೆ ಬಿಜೆಪಿಯಲ್ಲಿರುವ ಪುತ್ತಿಲ ವಿರೋಧಿ ಬಣವು ಮೂರು ಷರತ್ತು ವಿಧಿಸಿದೆ..! ಹೀಗಾಗಿ ಪುತ್ತಿಲ ಪರಿವಾರ ಮತ್ತು ಬಿಜೆಪಿ ಒಂದಾಗುವ ಯತ್ನಕ್ಕೆ ಅಡ್ಡಿ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗುರುವಾರ ಸಂಜೆ ಪುತ್ತಿಲ ಪರಿವಾರ ಹಾಗೂ ಜಿಲ್ಲಾ, ತಾಲೂಕು ಬಿಜೆಪಿ ಮುಖಂಡರು ಜಂಟಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಮಾ.15 ರಂದು ಸಂಜೆ 6 ಗಂಟೆಗೆ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಸೇರ್ಪಡೆ ಕಾರ್ಯ ನಡೆಸಲು ವೇದಿಕೆ ಸಿದ್ಧವಾಗಿತ್ತು. ಅದೇ ರೀತಿ ಪುತ್ತಿಲ ಪರಿವಾರದ ಕಾರ್ಯಕರ್ತರು ಮಂಗಳೂರಿಗೆ ತೆರಳಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಹಲವಾರು ಮಂದಿ ಜಮಾಯಿಸಿದ್ದರು.
ದಿಢೀರ್ ಸಭೆ
ಪುತ್ತಿಲ ಸೇರ್ಪಡೆಗೆ ಪುತ್ತೂರಿನ ಕೆಲ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಹೀಗಾಗಿ ಸಂಜೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿ ತುರ್ತು ಸಭೆ ನಡೆಸಿದರು.
ಈ ವೇಳೆ ಕೆಲ ಕಾರ್ಯಕರ್ತರು, ಮುಖಂಡರು ಗಡುವು ವಿಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಷರತ್ತು..?
ಬಿಜೆಪಿ ಕಾರ್ಯಕರ್ತನ ವಿರುದ್ಧ ಪುತ್ತಿಲ ಪರಿವಾರ ದಾಖಲಿಸಿರುವ ಕೇಸ್ ಅನ್ನು ಹಿಂಪಡೆಯುವುದು, ಅರುಣ್ ಪುತ್ತಿಲ ಅವರಿಗೆ ಪುತ್ತೂರಿನಲ್ಲಿ ಯಾವುದೇ ಸ್ಥಾನಮಾನ ನೀಡದಿರುವುದು, ಪುತ್ತಿಲ ಸೇರ್ಪಡೆಗೆ ಮೊದಲೇ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಬೇರೇ ಹೆಸರನ್ನು ಅಂತಿಮಗೊಳಿಸಿ ಪ್ರಕಟಿಸಬೇಕು ಎನ್ನುವ ಬೇಡಿಕೆಯನ್ನು ತುರ್ತು ಸಭೆಯಲ್ಲಿ ಪ್ರಸ್ತಾವಿಸಿದ್ದು, ಹಾಗೆಯೇ ಕೆಲ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಏನಂದ್ರು..!?
ಸಭೆಯ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ಲೋಕಸಭಾ ಚುನಾವಣೆಯ ತಯಾರಿಯ ಬಗ್ಗೆ ಚರ್ಚೆ ನಡೆಸಿದೆವು ಹಾಗೂ ಎಲ್ಲಾ ಸಂಘಪರಿವಾರದವರು ಜೊತೆಗೂಡಿ ಕೆಲಸ ಮಾಡುವುದೆಂದು ಸಭೆಯಲ್ಲಿ ನಿರ್ಧರಿಸಿದೆವು ಎಂದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿರುವುದು ನಾವು ಪ್ರಚಾರ ಮಾಡಿದ್ದಲ್ಲ.., ಮಾಧ್ಯಮದವರು ಪ್ರಚಾರ ಕೊಟ್ಟದ್ದು ಎಂದು ಹೇಳಿದರು.

























