ಪುತ್ತೂರು : ಚೆಂಡೆ, ಬ್ಯಾಂಡಿನೊಂದಿಗೆ ಶಾಸಕರು ತಂದಿರುವ ಅನುದಾನದಲ್ಲಿನ ಕಾಮಗಾರಿಗಳ ಮಾಹಿತಿಯ ಬ್ಯಾನರೊಂದನ್ನು ತೋರಿಸುತ್ತಾ ಶಾಸಕರ ವಾರಿಯರ್ಸ್ ತಂಡ ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಕೋಷ್ಟದ ಸದಸ್ಯ ತಾರಿಗುಡ್ಡೆಯ ಜಯಾನಂದ ಕೆ. ಎಂಬವರ ಮನೆಗೆ ತೆರಳಿ ಶಾಸಕರು ತಂದ ಅನುದಾನ, ನಡೆದಿರುವ ಕಾಮಗಾರಿಗಳ ವಿವರಣೆ ನೀಡಿದ ವೇಳೆ ಅಲ್ಲಿ ಚರ್ಚೆ ಉಂಟಾಗಿ,ಮಾತಿನ ಚಕಮಕಿ ನಡೆದ ಘಟನೆ ಮಾ.17 ರಂದು ಸಂಜೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಜಯಾನಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಸುಮಾರು 1400 ಕೋಟಿ ರೂ. ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ದಯಾನಂದ ಅವರು ಕಾಮಗಾರಿ ನಡೆದಿಲ್ಲ, ಅನುದಾನ ಬಂದಿಲ್ಲ, ಎಂದೆಲ್ಲ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಈ ಕುರಿತು ನಿರಂತರವಾಗಿ ವ್ಯಂಗ್ಯವಾಗಿ ಬರೆಯುತ್ತಿರುವುದಾಗಿ ವಾರಿಯರ್ಸ್ ತಂಡ ಅವರ ಮನೆಗೆ ಚೆಂಡೆ, ಬ್ಯಾಂಡಿನೊಂದಿಗೆ ತೆರಳಿ ಶಾಸಕರು ತಂಡ ಅನುದಾನ, ನಡೆದ ಕಾಮಗಾರಿಗಳ ಬ್ಯಾನರ್ ಪ್ರದರ್ಶಿಸಿ ಮಾಹಿತಿ ನೀಡಲಾರಂಭಿಸಿದ ವೇಳೆ ಜಯಾನಂದ ಮತ್ತು ತಂಡದಲ್ಲಿರುವ ಮಧ್ಯೆ ಚರ್ಚೆ, ಮಾತಿನ ಚಕಮಕಿ ನಡೆಯಿತು.

ಈ ವೇಳೆ ಮನೆಯಲ್ಲಿದ್ದವರು, ಮನೆಗೆ ಬಂದು ಏನು ನಿಮ್ಮ ದರ್ಬಾರು, ಫೇಸ್ಬುಕ್ ನಲ್ಲಿ ಬರೆದಿದ್ದರೆ ಅಲ್ಲಿಯೇ ಹೋಗಿ ಕೇಳಿ ಎಂದು ಹೇಳಿದ ಘಟನೆಯೂ ನಡೆಯಿತು. ಶಾಸಕರು ತಂದ ಅನುದಾನ ಮತ್ತು ಕಾಮಗಾರಿ ಕುರಿತು ಮಾಹಿತಿ ನೀಡಿದ ವಾರಿಯರ್ಸ್ ತಂಡ ಬಳಿಕ ಅಲ್ಲಿಂದ ನಿರ್ಗಮಿಸಿತು.
ಈ ಘಟನೆ ಬಳಿಕ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಕೃಷ್ಣಪ್ಪ ಪೂಜಾರಿಯವರ ಪುತ್ರ ಜಯಾನಂದ ಅವರು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಸದಸ್ಯನಾಗಿದ್ದು, ಮಾ.17ರಂದು ಸಂಜೆ ವೇಳೆಗೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ನನ್ನ ಮನೆಯೊಳಗೆ ಏಕಾಏಕಿಯಾಗಿ ಪ್ರಜ್ವಲ್ ರೈ,ಸನತ್ ರೈ ಸಹಿತ ಸುಮಾರು 15 ಮಂದಿ, ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಬರೆದಿರುವ ಬ್ಯಾನರ್ ಪ್ರದರ್ಶಿಸುತ್ತಾ, ಚೆಂಡೆಗಳನ್ನು ಜೋರಾಗಿ ಬಡಿಯುತ್ತಾ ಅಕ್ರಮ ಪ್ರವೇಶ ಮಾಡಿ ನನಗೆ ಹಾಗೂ ನನ್ನ ವೃದ್ಧ ತಾಯಿ, ಪತ್ನಿ ಹಾಗೂ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಮನೆಯ ಗೋಡೆಗಳಿಗೆ ಕಾಲಿನಿಂದ ಒದ್ದು ಅಸಭ್ಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ನೀನು ಬಿಜೆಪಿ ಬಗ್ಗೆ ಫೇಸ್‌ಬುಕ್‌ನಲ್ಲಿ ಭಾರೀ ಬರೆಯುತ್ತೀಯಾ ಎಂದು ಗದರಿಸಿ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಜೀವಬೆದರಿಕೆಯೊಡ್ಡಿದ್ದಾರೆ. ಇದರಿಂದಾಗಿ ನಾನು ಮಾನಸಿಕವಾಗಿ ನೊಂದುದಲ್ಲದೆ,ಜೀವಭಯದಿಂದ ಬದುಕುವಂತಾಗಿದೆ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತಿಲ, ಬಿಜೆಪಿ ನಾಯಕರ ಭೇಟಿ :
ಜಯಾನಂದ ಅವರ ಮನೆಗೆ ಅರುಣ್ ಕುಮಾರ್ ಪುತ್ತಿಲ, ಪಿ.ಜಿ. ಜಗನ್ನಿವಾಸ್ ರಾವ್ ಸಹಿತ ಬಿಜೆಪಿ ಪ್ರಮುಖರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಘಟನೆಯನ್ನು ಖಂಡಿಸಿದರು.


























