ಉತ್ತರ ಪ್ರದೇಶ : ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದ್ದು, ಈ ಸುದ್ದಿ ತಿಳಿದು ಬಂದ ಆಕೆಯ ತವರು ಮನೆಯವರು ಅಳಿಯನ ಮನೆಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಅತ್ತೆ-ಮಾವ ಇಬ್ಬರು ಸಾವನ್ನಪ್ಪಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಂಶಿಕಾ ಕೇಸರವಾಣಿ ಎಂಬ ಮಹಿಳೆ ಕಳೆದ ವರ್ಷ ವಿವಾಹವಾಗಿದ್ದಳು. ಸೋಮವಾರದಂದು ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಸಾವಿನ ಸುದ್ದಿ ತಿಳಿದ ಕೂಡಲೇ ತವರು ಮನೆಯವರು ಓಡೋಡಿ ಬಂದಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪ
ಅಂಶಿಕಾ ಸಾವನ್ನಪ್ಪಿರೋದನ್ನು ಕಂಡ ತವರು ಮನೆಯವರು ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ವೇಳೆ ಅಳಿಯನ ಮನೆಯವರಿಗೆ ಮತ್ತು ಅಂಶಿಕಾ ಮನೆಯವರಿಗೆ ಗಲಾಟೆ ನಡೆದಿದೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿದೆ.
ಅತ್ತೆ-ಮಾವ ಸುಟ್ಟು ಭಸ್ಮ
ಕೊನೆಗೆ ಅಂಶಿಕಾ ತವರು ಮನೆಯವರು ಆಕೆಯ ಅಳಿಯನ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅತ್ತೆ-ಮಾವ ಇಬ್ಬರೂ ಸಾವನ್ನಪ್ಪಿದ್ದಾರೆ.
ತವರು ಮನೆಯವರಿಂದ ಗಂಡನ ಮನೆಗೆ ಬೆಂಕಿ
ಪ್ರಯಾಗ್ರಾಜ್ ನಗರ ಪೊಲೀಸ್ ಉಪ ಆಯ್ತುಕ್ತ ದೀಪಕ್ ಭುಕರ್ ಮಾತನಾಡಿ, ‘ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ 11 ಗಂಟೆಗೆ ಕರೆ ಬಂದಿತ್ತು. ಘಟನಾ ಸ್ಥಳಕ್ಕೆ ತಲುಪಿದಾಗ ಎರಡು ಮನೆಯವರು ಹೊಡೆದಾಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಮಹಿಳೆಯ ತವರು ಮನೆಯವರು ಅಳಿಯನ ಮನೆಗೆ ಬೆಂಕಿ ಹಚ್ಚಿದ್ದಾರೆ. ತಕ್ಷಣ ಪೊಲೀಸರು 5 ಜನರನ್ನು ರಕ್ಷಿಸಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಯಿತು’ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಅವರು, ‘ಅಗ್ನಿಶಾಮಕ ದಳದವರು ಬೆಳಗ್ಗಿನ ಜಾವ 3 ಗಂಟೆಗೆ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ ಬಳಿಕ ಮನೆಯಲ್ಲಿ 2 ಶವ ಸಿಕ್ಕಿದೆ. ಬಳಿಕ 2 ಶವವನ್ನು ಹೊರತೆಗೆಯಲಾಯಿತು. ಸತ್ತವರನ್ನು ಆಶಿಕಾ ಮಾವ ರಾಜೇಂದ್ರ ಕೇಸರವಾಣಿ ಮತ್ತು ಅತ್ತೆ ಶೋಭಾ ದೇವಿ ಎಂದು ಗುರುತಿಸಲಾಗಿದೆ’ ಎಂದು ದೀಪಕ್ ಭುಕರ್ ಹೇಳಿದ್ದಾರೆ.


























