ಪುತ್ತೂರು : ಮದುವೆಯಾಗಲು ನಿರಾಕರಿಸಿದ ಹಿನ್ನೆಲೆ ಮಹಿಳೆಗೆ ಜೀವ ಬೆದರಿಕೆ ಹಾಕಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಮೇರೆಗೆ ಉಡುಪಿ ಮೂಲದ ಪ್ರಶಾಂತ್ ಕೋಟ್ಯಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆಗೆ 7 ವರ್ಷದ ಹಿಂದೆ ಮದುವೆಯಾಗಿ ವಿಚ್ಛೇದನವಾಗಿದ್ದು, ಮಗನೊಂದಿಗೆ ತಾಯಿ ಮನೆಯಲ್ಲಿ ವಾಸ್ತವ್ಯವಿದ್ದು, 2022ರಲ್ಲಿ ಮಹಿಳೆಗೆ ಮ್ಯಾಟ್ರಿಮೋನಿಯೊಂದರ ಮೂಲಕ ಪ್ರಶಾಂತ್ ಕೋಟ್ಯಾನ್ ಉಡುಪಿ ಎಂಬಾತನ ಪರಿಚಯವಾಗಿ ಮದುವೆಯಾಗಲು ತೀರ್ಮಾನಿಸಿರುತ್ತಾರೆ.
ಪ್ರಶಾಂತ್ ಪೂರ್ವಾಪರವನ್ನು ಮಹಿಳೆಯ ಮನೆಯವರು ವಿಚಾರಿಸಿದಾಗ ಉತ್ತಮ ಅಭಿಪ್ರಾಯ ಕಂಡುಬಾರದ ಹಿನ್ನೆಲೆಯಲ್ಲಿ, ಮಹಿಳೆ ಮತ್ತು ಮನೆಯವರು ಮದುವೆಗೆ ನಿರಾಕರಿಸಿರುತ್ತಾರೆ. ಇದರಿಂದ ಅಸಮಧಾನಗೊಂಡ ಪ್ರಶಾಂತ್ ಮಹಿಳೆಗೆ ಕರೆಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಫೋಟೋಗಳನ್ನು ಹಾಕುವುದಾಗಿ ಹಾಗೂ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದು, ಪ್ರಶಾಂತ್ ಮಹಿಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವುದಾಗಿದೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 15/2024 ಕಲಂ: 354(D),506 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























