ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಇಂದು ಬೆಳಿಗ್ಗೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆಯಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ., ನಾಮಪತ್ರ ಸಲ್ಲಿಸಿದರು.

ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ನಡೆದ ಮೆರವಣಿಗೆಗೆ ಚಾಲನೆ ನೀಡಿದರು.

ಮಂಗಳೂರಿನ ಅಳಕೆ, ನ್ಯೂಚಿತ್ರಾ ಟಾಕೀಸ್, ಉಷಾ ಕಿರಣ್ ಹೋಟೆಲ್,ಟೆಂಪಲ್ ಸ್ಕ್ವಾರ್, ಜಿಎಚ್ಎಸ್ ರೋಡ್, ಗಣಪತಿ ಹೈಸ್ಕೂಲ್ ರಸ್ತೆ, ಓಲ್ಡ್ ಐಡಿಯಲ್ ಪಾರ್ಲರ್, ಮಂಗಳೂರು ವಿವಿ ಕಾಲೇಜು ರೋಡ್, ಕ್ಲಾಕ್ ಟವರ್, ಟೌನ್ ಹಾಲ್ ರಸ್ತೆಯ ಮೂಲಕ ಮೆರವಣಿಗೆ ಸಾಗಿ ಬಂತು.
ತೆರದ ವಾಹನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಇದ್ದು, ಮೆರವಣಿಗೆಯಲ್ಲಿ ತುಳುನಾಡ ಧ್ವಜ ರಾರಾಜಿಸುದರ ಜೊತೆಗೆ ಗೊಂಬೆ ಬಳಗ, ಚೆಂಡೆ, ಕೊಂಬು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಧ್ವಜದೊಂದಿಗೆ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಡಾ.ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಅಶೋಕ್ ಕುಮಾರ್ ರೈ, ಮಾಜಿ ಸಚಿವ ಜೆ.ಆರ್.ಲೋಬೊ ಮತ್ತಿತರರು ಉಪಸ್ಥಿತರಿದ್ದರು.
























