ಪುತ್ತೂರು : ಜಿಲ್ಲಾ ಬಜರಂಗದಳದ ಸಂಚಾಲಕ ಭರತ್ ಕುಮಾರ್ ಕುಮ್ಡೇಲ್ ಅವರನ್ನು ಮೈಸೂರು ಜಿಲ್ಲೆಗೆ ಗಡಿಪಾರು ಮಾಡಿ ನೋಟೀಸ್ ನೀಡಿರುವುದನ್ನು ವಿಶ್ವ ಹಿಂದೂ ಪರಿಷದು -ಬಜರಂಗದಳ ಖಂಡಿಸಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕೇವಲ ಹಿಂದೂ ಕಾರ್ಯಕರ್ತರನ್ನು ಮಾತ್ರ ಗುರಿಯಾಗಿರಿಸಿಕೊಂಡು ಅವರನ್ನು ಗಡಿಪಾರು ಮಾಡುವ ಕಾರ್ಯ ಮಾಡುತ್ತಿದೆ.
ಪುತ್ತೂರು ಜಿಲ್ಲಾ ಬಜರಂಗದಳದ ಸಂಚಾಲಕ ಭರತ್ ಕುಮಾರ್ ಕುಮ್ಡೇಲ್ ರನ್ನು ಕೂಡಾ ಗುರಿಯಾಗಿರಿಸಿಕೊಂಡು ಅವರಿಗೆ ನೋಟೀಸ್ ಹೊರಡಿಸಲಾಗಿದೆ. ರಾಜ್ಯ ಸರಕಾರ ಅವರನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲು ಸಂಚು ಹೂಡಿದೆ ಎಂದು ವಿಶ್ವ ಹಿಂದೂ ಪರಿಷದ್‌ನ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಬ್‌ಗಳನ್ನಿಟ್ಟು ಸ್ಫೋಟಿಸುವ ಭಯೋತ್ಪಾದಕರನ್ನು `ಬ್ರದರ‍್ಸ್’ ಎಂದು ಕರೆದುಕೊಳ್ಳುವ ಮನಃಸ್ಥಿತಿಯ ಕಾಂಗ್ರೆಸ್ ನಾಯಕರು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗಡಿಪಾರು ಮಾಡುವಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ರಾಜ್ಯ ಸರಕಾರದ ಇಂತಹ ಹಿಂದೂ ವಿರೋಧಿ ಧೋರಣೆಯನ್ನು ವಿಶ್ವ ಹಿಂದೂ ಪರಿಷದ್-ಬಜರಂಗದಳ ಖಂಡಿಸುತ್ತದೆ. ಮಾತ್ರವಲ್ಲದೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಿಂದೂಗಳು ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠವನ್ನು ಕಲಿಸಲಿದ್ದಾರೆ. ಹಿಂದೂಗಳನ್ನೇ ಗುರಿಯಾಗಿರಿಸಿ ಗಡಿಪಾರು ಮಾಡುವಂತಹ ಸರಕಾರದ ಹೀನ ಮನಃಸ್ಥಿತಿ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

























