ಬಂಟ್ವಾಳ : ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳದ ನರಿಕೊಂಬು ಎಂಬಲ್ಲಿ ನಡೆದಿದೆ.
ನರಿಕೊಂಬು ನಿವಾಸಿ ಪವನ್ (17) ಮೃತ ಯುವಕ.
ಮನೆಯಿಂದ ಬಿ.ಸಿ.ರೋಡ್ ಕಡೆಗೆ ಸ್ಕೂಟರ್ ನಲ್ಲಿ ಸಹಸವಾರನಾಗಿ ಸಂಚಾರ ಮಾಡುತ್ತಿದ್ದ ವೇಳೆ ನರಿಕೊಂಬು ದಿಂಡಿಗೆ ಎಂಬಲ್ಲಿ ಸ್ಕೂಟರ್ ಗೆ ರಿಕ್ಷಾ ಡಿಕ್ಕಿಯಾಗಿದೆ.
ಪರಿಣಾಮ ಪವನ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಘಟನೆಯಿಂದ ರಿಕ್ಷಾ ಚಾಲಕ ಸಜೀಪ ನಿವಾಸಿ ಜಾಬೀರ್ ಕೂಡ ಗಾಯಗೊಂಡಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ. ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪವನ್ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದ. ರಜಾ ದಿನಗಳಲ್ಲಿ ಅಜ್ಜನ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.


























