ಕೊಡಗು : ಚಿತ್ರದುರ್ಗದ ಖಾಸಗಿ ಬಸ್ ಪಲ್ಟಿ ಪ್ರಕರಣ ಮಾಸುವ ಮುನ್ನವೇ ಕೊಡಗಿನಲ್ಲಿ ಅಂತದ್ದೇ ಘಟನೆ ಬೆಳಕಿಗೆ ಬಂದಿದೆ. ರಾಷ್ಟೀಯ ಹೆದ್ದಾರಿ 275ರ ಮಡಿಕೇರಿ ಬಳಿಯ ಸಂಪಾಜೆ ಬಳಿ ಖಾಸಗಿ ಬಸ್ ಪಲ್ಟಿ ಹೊಡೆದಿದೆ. ಪರಿಣಾಮ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಗೌರಿ ಶಂಕರ ಹೆಸರಿನ ಖಾಸಗಿ ಬಸ್ ಪಲ್ಟಿ ಹೊಡೆದಿದೆ. ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಸುಳ್ಯಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬಸ್ನಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಾಷ್ಟೀಯ ಹೆದ್ದಾರಿ 275ರಲ್ಲಿ ಗಂಟೆಗಟ್ಟಲೆ ಕಾಲ ಟ್ರಾಫಿಕ್ ಜಾಮ್ ಆಗಿದೆ.



























