ನವದೆಹಲಿ : ಅಮೆರಿಕಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯನ್ನು ನಿಗೂಢವಾಗಿ ಹತ್ಯೆ ಮಾಡಲಾಗಿದ್ದು, ಕಾಣೆಯಾದ ಒಂದು ತಿಂಗಳ ಬಳಿಕ ಶವ ಪತ್ತೆಯಾಗಿದೆ.
ಮೃತ ಯುವಕನನ್ನು ಮೊಹಮ್ಮದ್ ಅಬ್ದುಲ್ ಅರ್ಫಾತ್ ಎಂದು ಗುರುತಿಸಲಾಗಿದೆ. ಈತ ಕಳೆದ ಮಾರ್ಚ್ 7ರಿಂದ ನಾಪತ್ತೆಯಾಗಿದ್ದ.
ಹೈದರಾಬಾದ್ ಮೂಲದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೆರಿಕಾಗೆ ತೆರಳಿದ್ದ. ನಾಪತ್ತೆಯಾದ ಒಂದು ತಿಂಗಳ ಬಳಿಕ ವಿದ್ಯಾರ್ಥಿಯ ಮೃತದೇಹ ಅಮೆರಿಕಾದ ಓಹಿಯೋದ ಕ್ಲೀವ್ಲ್ಯಾಂಡ್ ಬಳಿ ಪತ್ತೆಯಾಗಿದೆ.
ಕಳೆದ ಮಾರ್ಚ್ 7ರಿಂದ 25 ವರ್ಷದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಫೋನ್ ಸ್ವಿಚ್ ಆಫ್ ಆಗಿತ್ತು. ಮೊಹಮ್ಮದ್ ಅಬ್ದುಲ್ ಅರ್ಫಾತ್ ತಂದೆ ತಮಗೆ ಒಂದು ಬೆದರಿಕೆ ಕರೆ ಬಂದಿದ್ದು, 1,200 ಡಾಲರ್ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.
ಅಲ್ಲದೇ, ಕಿಡ್ನ್ಯಾಪ್ ಮಾಡಿದ್ದ ದುಷ್ಕರ್ಮಿಗಳ ಗ್ಯಾಂಗ್ ಡ್ರಗ್ಸ್ ಮಾರಾಟ ಮಾಡಲು ಒತ್ತಾಯ ಮಾಡಿದೆ. ಭಾರತೀಯ ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು 1200 ಡಾಲರ್ ಹಣವನ್ನು ಡಿಮ್ಯಾಂಡ್ ಮಾಡಿದ್ದರು. ಅಲ್ಲದೇ ನನ್ನ ಮಗನ ಕಿಡ್ನಿಯನ್ನು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಅಬ್ದುಲ್ ಅರ್ಫಾತ್ ಸಾವನ್ನಪ್ಪಿದ ಸುದ್ದಿಯನ್ನು ನ್ಯೂಯಾರ್ಕ್‌ನ ಭಾರತೀಯ ರಾಯಭಾರ ಕಚೇರಿ ಖಚಿತ ಪಡಿಸಿದೆ. ಭಾರತೀಯ ವಿದ್ಯಾರ್ಥಿ ಪತ್ತೆಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಆದರೆ ಅಬ್ದುಲ್ ಅರ್ಫಾತ್ ಸಾವನ್ನಪ್ಪಿದ್ದಾನೆ ಎಂದು ಭಾರತದ ಕಾನ್ಸುಲೇಟ್ ಜನರಲ್ ಮಾಹಿತಿ ನೀಡಿದ್ದಾರೆ. 2024ರಲ್ಲಿ ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸಾವನ್ನಪ್ಪಿದ 11ನೇ ಪ್ರಕರಣ ಇದಾಗಿದೆ.



























