ಮಂಗಳೂರು : ಕೆಲವು ತಿಂಗಳುಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೆ ಒಂದು ಕಾಡಾನೆ ಕಾಣಿಸಿಕೊಂಡಿದೆ ಅಚ್ಚರಿಯೆಂದರೆ, ತಿರುವಿನಲ್ಲಿ ನಿಂತಿದ್ದ ಕಾಡಾನೆ ಕಾಣಿಸದೆ ಬಂದ ಬೈಕ್ ಸವಾರರು ಪವಾಡಸದೃಶರಾಗಿ ಪಾರಾಗಿದ್ದಾರೆ.
ಚಾರ್ಮಾಡಿ ಘಾಟ್‌ನ ಒಂಬತ್ತನೇ ತಿರುವಿನಲ್ಲಿ ಏಪ್ರಿಲ್ 8ರಂದು ಮಧ್ಯಾಹ್ನದ ಸಮಯದಲ್ಲಿ ಕಾಡಾನೆಯೊಂದು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಎರಡು ತಿಂಗಳ ಹಿಂದೆ ನಡೆದ ಇದೇ ರೀತಿಯ ಘಟನೆಯನ್ನು ನೆನಪಿಸಿದೆ. ಆಗಲೂ ಸಹ ಕಾಡಾನೆಗಳು ಹಗಲು ಹೊತ್ತಿನಲ್ಲಿ ರಸ್ತೆಗಳನ್ನು ದಾಟುತ್ತಿರುವುದು ನೋಡಿ ವಾಹನ ಸವಾರರು ಭಯಭೀತರಾಗಿದ್ದರು.
ನೆರಿಯದ ಬಂಜಾರುಮಲೆಯಿಂದ ಬಂದಿರಬಹುದೆಂದು ಭಾವಿಸಲಾದ ಆನೆಯು ಅರಣ್ಯದ ಕಡೆಗೆ ಹೋಗುವ ಮೊದಲು ಸ್ವಲ್ಪ ಸಮಯ ರಸ್ತೆಬದಿಯಲ್ಲಿ ನಿಂತಿತ್ತು.
ಆನೆಯನ್ನು ಗಮನಿಸಿದ ವಾಹನ ಸವಾರರು ತಮ್ಮ ವಾಹನಗಳನ್ನು ತಡೆದು ರಸ್ತೆ ದಾಟಲು ಅನುವು ಮಾಡಿಕೊಟ್ಟರು. ಆದರೆ, ಬೈಕ್ ಸವಾರರೊಬ್ಬರು ತಿರುವಿನಲ್ಲಿ ಆನೆ ನಿಂತಿರುವುದನ್ನು ಕಾಣದೆ, ಸಂಚರಿಸಿದ್ದಾರೆ. ಅದೃಷ್ಟವಶಾತ್ ಆನೆಯ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಸಿನಿಮೀಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.



























