ಮಂಗಳೂರು : ನಗರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಇರುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಶನಿವಾರ ಸಂಜೆಯಿಂದಲೇ ಪೊಲೀಸರು ಕಾರ್ಯ ನಿರತರಾಗಿದ್ದು, ನವದೆಹಲಿಯಿಂದ ಆಗಮಿಸಿರುವ ಎಸ್‌ಪಿಜಿ ಅಧಿಕಾರಿಗಳು ರೋಡ್ ಶೋ ಸಾಗುವ ಮಾರ್ಗದ ಮೇಲೆ ನಿಗಾ ಇಟ್ಟಿದ್ದಾರೆ.
ರ್‍ಯಾಲಿ ನಡೆಯುವ ರಸ್ತೆಯುದ್ದಕ್ಕೂ 25ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.
ರೋಡ್ ಶೋ ನಡೆಯುವ ರಸ್ತೆ ಬದಿಗಳ ಕಟ್ಟಡಗಳಲ್ಲಿ ರವಿವಾರ ಉಳಿದುಕೊಳ್ಳುವವರ ಆಧಾರ್ ಕಾರ್ಡ್ ದಾಖಲೆಗಳನ್ನು ಪಡೆದುಕೊಳ್ಳಲು ಕಟ್ಟಡ ಮಾಲಕರಿಗೆ ಪೊಲೀಸರು ಸೂಚಿಸಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಬಳಿಕ ಪೂರ್ಣವಾಗಿ ಪೊಲೀಸರ ಸುಪರ್ದಿಗೆ ಬರಲಿದೆ.
ಎಡಿಜಿಪಿ, ಐಜಿಪಿ, 5 ಎಸ್‌ಪಿ/ ಡಿಸಿಪಿ, 10 ಡಿವೈಎಸ್‌ಪಿ/ ಎಸಿಪಿ, 36 ಇನ್ಸ್‌ಪೆಕ್ಟರ್, 67 ಪಿಎಸ್‌ಐ, 147 ಎಎಸ್‌ಐ, 1,207 ಹೆಡ್‌ಕಾನ್‌ಸ್ಟೆಬಲ್/ಕಾನ್‌ಸ್ಟೆಬಲ್‌ಗಳು, 92 ಗೃಹರಕ್ಷಕರು, 5 ಕೆಎಸ್‌ಆರ್‌ಪಿ ತುಕಡಿ, 19 ಸಿಎಆರ್ ತುಕಡಿ, 2 ಸಿಆರ್‌ಪಿಎಫ್ ತುಕಡಿ, 4 ಎಎಸ್‌ಸಿ ತಂಡ, 1 ಬಿಡಿಡಿಎಸ್ ತಂಡ, 30 ಡಿಎಫ್ಎಂಡಿ/ಎಚ್‌ಎಚ್‌ಎಂಡಿ, 34 ಸೆಕ್ಟರ್ ಮೊಬೈಲ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಪ್ರಧಾನಿ ಮೋದಿಯವರ ರೋಡ್ ಶೋ ವೇಳೆ ಎತ್ತರದ ಆಯಕಟ್ಟಿನ ಕಟ್ಟಡಗಳಲ್ಲಿ ಎಸ್‌ಪಿಜಿ ಯ ಸ್ನೆಪರ್‌ಗಳು ಹದ್ದಿನ ಕಣ್ಣು ಇರಿಸಲಿದ್ದಾರೆ. ಹಲವು ನೂರು ಮೀಟರ್‌ಗಳಷ್ಟು ದೂರ ಪ್ರಬಲ ಫೋಕಸ್ ಹೊಂದಿರುವ ಲೈಟ್‌ಗಳನ್ನು ಹಾಕಿ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳಲಾಗುತ್ತದೆ.
ಯಾರೆಲ್ಲ ಇರುತ್ತಾರೆ..!?
ಮೋದಿ ಚೆನ್ನೈಯಲ್ಲಿ ರೋಡ್ ಶೋ ನಡೆಸಿದ ರೀತಿಯ ಟೆಂಪೋ ಮಾದರಿಯ ವಾಹನವನ್ನೇ ಮಂಗಳೂರಿಗೂ ತರಿಸಲಾಗಿದೆ. ಇದರಲ್ಲಿ ಮೋದಿಯವರಲ್ಲದೆ ಅಭ್ಯರ್ಥಿಗಳಾದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅವಕಾಶವನ್ನು ಕೋರಿ ಎಸ್‌ಪಿಜಿಗೆ ಪತ್ರ ಬರೆಯಲಾಗಿದ್ದು, ಅಂತಿಮ ಅನುಮೋದನೆ ಸಿಗಬೇಕಿದೆ.
ಅಣಕು ರೋಡ್ ಶೋ
ಶನಿವಾರ ರಾತ್ರಿ ವೇಳೆ ಎಸ್‌ಪಿಜಿ ನೇತೃತ್ವದಲ್ಲಿ ಪೊಲೀಸರು ರಿಹರ್ಸಲ್, ಅಣಕು ರೋಡ್‌ಶೋ ನಡೆಸಿದರು. ಈ ಸಂದರ್ಭ ಕೆಂಜಾರು ವಿಮಾನ ನಿಲ್ದಾಣದಿಂದ ಮೋದಿಯವರು ಆಗಮಿಸಿ ನವಭಾರತ ವೃತ್ತದ ವರೆಗೆ ರೋಡ್ ಶೋ ನಡೆಸುವುದನ್ನು ರಿಯಲ್ ಟೈಂ ರೀತಿಯಲ್ಲಿ ನಡೆಸಲಾಯಿತು.
ಪ್ರಧಾನಿ ಲೇಡಿಹಿಲ್ ಗೆ ಆಗಮಿಸುವ ಕೊಟ್ಟಾರ, ಅಶೋಕನಗರ ಮಾರ್ಗ ದಲ್ಲಿನ ಹಂಪ್ಸ್‌ಗಳನ್ನು ತೆಗೆಯಲಾಗಿದೆ. ಜೊತೆಗೆ ರೋಡ್ ಶೋ ಸಾಗುವ ರಸ್ತೆಯ ಬದಿಯಲ್ಲಿನ ತ್ಯಾಜ್ಯಗಳನ್ನು ತೆಗೆದು ಸ್ವಚ್ಚಗೊಳಿಸಲಾಗಿದೆ. ಬ್ಯಾನರ್‌ಗಳು, ಇಂಟರ್‌ನೆಟ್ ಕೇಬಲ್‌ಗಳನ್ನೂ ತೆರವುಗೊಳಿಸಲಾಗಿದೆ. ಅಲ್ಲಲ್ಲಿ ಸಾಂಸ್ಕೃತಿಕ ಪ್ರದರ್ಶನಗಳಿರಲಿದ್ದು, ಅದಕ್ಕೂ ಭರದ ಸಿದ್ಧತೆ ನಡೆದಿದೆ.
ಹೀಗಿರಲಿದೆ ಪ್ರಧಾನಿ ರೋಡ್ ಶೋ
– ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.
– ಕೆಂಜಾರಿನಿಂದ ನೇರವಾಗಿ ಲೇಡಿಹಿಲ್ ನಾರಾಯಣ ಗುರು ವೃತ್ತಕ್ಕೆ.
– ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ.
– ರೋಡ್ ಶೋ ನಡೆಸುವ ವಿಶೇಷ ವಾಹನಕ್ಕೆ ಮೋದಿ.
-ಸದ್ಯದ ವೇಳಾಪಟ್ಟಿಯಂತೆ ರಾತ್ರಿ 7.45ಕ್ಕೆ ರೋಡ್ ಶೋ ಆರಂಭ.
– ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ಮೂಲಕ ರೋಡ್‌ಶೋ
– ನವಭಾರತ ವೃತ್ತದಲ್ಲಿ ಸಮಾಪ್ತಿ
-ಅಲ್ಲಿಂದ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣಕ್ಕೆ ನಿರ್ಗಮನ.
– ವಿಶೇಷ ವಿಮಾನ ಮೂಲಕ ಕೊಚ್ಚಿಗೆ ಪ್ರಯಾಣ.