ಪುತ್ತೂರು : ಧಗ ಧಗಿಸುತ್ತಿರುವ ಬೇಸಗೆಬಿಸಿಗೆ ಎಳೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ಸೀಮಿತವಾಗಿದ್ದ ದೀರ್ಘ ರಜಾ ಅವಧಿಯನ್ನು ಎಲ್ಲ ಜಿಲ್ಲೆಗಳಿಗೂ ಅನ್ವಯಿಸಲಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಇದೇ ಮೊದಲ ಬಾರಿಗೆ ಗರಿಷ್ಠ ರಜೆ ಘೋಷಿಸಲಾಗಿದೆ. ಹೀಗಾಗಿ ಬಿಸಿಲಿನ ಧಗೆಯಲ್ಲಿ ಮಕ್ಕಳು ಅಂಗವಾಡಿಗೆ ಹೋಗಿಬರುವ ಸಂಕಷ್ಟದಿಂದ ಪಾರಾಗಿದ್ದಾರೆ.
ಪ್ರತೀ ವರ್ಷದಂತೆ ಈ ಬಾರಿಯು 15 ದಿನಗಳ ಅವಧಿಗೆ ಅಂಗನವಾಡಿಗಳಿಗೆ ರಜೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಪುಟಾಣಿಗಳ ಹಿತದೃಷ್ಟಿಯಿಂದ ಸಮಯ ಪರಿಷ್ಕರಿಸಿ ಎ.15ರಿಂದ ಮೇ.26ರ ತನಕ ಬೇಸಿಗೆ ರಜೆ ಘೋಷಿಸಲಾಗಿದೆ. ಅಂದರೆ ಒಟ್ಟು 41 ದಿನಗಳರಜೆ ದೊರೆತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಎ.15 ರಿಂದ ಮೇ 11ರ ತನಕ 8ರಿಂದ ಮಧ್ಯಾಹ್ನ 12 ಗಂಟೆ ತನಕ ಕೇಂದ್ರಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದ್ದು, ಮೇ 11 ರಿಂದ 26 ರ ತನಕ ಅಂಗನವಾಡಿ ಸಿಬ್ಬಂದಿಗಳಿಗೆ ರಜೆ ಘೋಷಿಸಲಾಗಿದೆ.
ಬಿಸಿಲಿನ ತೀವ್ರತೆ, ಚುನಾವಣ ಕಾರಣಗಳಿಂದ ಈ ಬಾರಿ ಎ. 15ರಿಂದ ಮೇ 26ರ ತನಕ ಅಂಗನವಾಡಿ ಮಕ್ಕಳಿಗೆ ವಿಶೇಷ ರಜೆ ನೀಡಲಾಗಿದೆ. ಇದರಲ್ಲಿ ಮೇ 15ರಿಂದ 26ರ ತನಕ ಬೇಸಗೆ ರಜೆಯು ಸೇರಿದೆ. ಆಹಾರವನ್ನು ಮಕ್ಕಳ ಮನೆಗೆ ನೀಡಲಾಗುತ್ತದೆ. ಇಷ್ಟು ದೀರ್ಘ ರಜೆ ನೀಡಿರುವುದು ಇದೇ ಮೊದಲು.
– ಕುಮಾರಕೃಷ್ಣ, ಮಕ್ಕಳ ರಕ್ಷಣಾ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲೆ