ಮಂಗಳೂರು : ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮೂಲ್ಕಿ- ಮೂಡುಬಿದ್ರೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ನಡೆಸಿದರು.

ಅಭ್ಯರ್ಥಿಯಾದ ಬಳಿಕ ಚೌಟ ಅವರು ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಸಂಚಾರ ನಡೆಸಿದ್ದು, ಹಳೆಯಂಗಡಿ, ಕಿನ್ನಿಗೋಳಿ ಪೇಟೆ ಮತ್ತು ಮೂಡುಬಿದ್ರೆ ಪೇಟೆಯಲ್ಲಿ ಉದ್ದಕ್ಕೂ ಸಂಚರಿಸಿ ಅಂಗಡಿ, ಬೀದಿಗಳಲ್ಲಿ ಜನರ ಬಳಿ ಮತಯಾಚನೆ ಮಾಡಿದರು.

ಬೆಳಗ್ಗೆ ಕಾರ್ಯಕರ್ತರ ಜೊತೆ ತೋಕೂರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಬ್ರಿಜೇಶ್ ಚೌಟ, ದೇವರಲ್ಲಿ ಪ್ರಾರ್ಥಿಸಿ ಬಳಿಕ ಮತಯಾಚನೆಯಲ್ಲಿ ಕಾರ್ಯಾರಂಭಿಸಿದರು. ಬಳಿಕ ಹಳೆಯಂಗಡಿ ಮತ್ತು ಕಿನ್ನಿಗೋಳಿ ಪೇಟೆಯಲ್ಲಿ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಬಿಜೆಪಿ ಪ್ರಮುಖರ ಜೊತೆಗೆ ಸಂಚರಿಸಿದ ಚೌಟರಿಗೆ ಅಪಾರ ಜನಬೆಂಬಲ ವ್ಯಕ್ತವಾಯಿತು.

ಬಳ್ಕುಂಜೆ ವಿಠೋಧರ ಮಂದಿರ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಸಂಜೆ ವೇಳೆಗೆ ಮೂಡುಬಿದ್ರೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪ್ರಮುಖರೊಂದಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.

ಮೂಡುಬಿದ್ರೆ ಪೇಟೆಯಲ್ಲಿ ಉದ್ದಕ್ಕೂ ಯುವಕರು ಸಾಥ್ ನೀಡಿದ್ದು, ಕಿನ್ನಿಗೋಳಿಯಲ್ಲಿ ಸ್ಥಳೀಯ ಮುಖಂಡ ಈಶ್ವರ್ ಕಟೀಲ್ ನೇತೃತ್ವದಲ್ಲಿ ಮಹಿಳೆಯರು, ಸ್ಥಳೀಯ ಕಾರ್ಯಕರ್ತರು ಜೈಕಾರ ಕೂಗಿದರು.

ಸಂಜೆ ಬೆಳುವಾಯಿ ನಡ್ಡೋಡಿ ಬ್ರಹ್ಮಕಲಶ ನಡೆಯುತ್ತಿದ್ದಲ್ಲಿಗೆ ತೆರಳಿ ಜನರಲ್ಲಿ ಮತಯಾಚನೆ ಮಾಡಿದರು. ಬಳಿಕ, ಶಿರ್ತಾಡಿಯ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನ, ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನ ಭೇಟಿಗೈದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಸಾಥ್ ನೀಡಿದ್ದು, ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರ ಜೊತೆಗಿದ್ದು, ಬಿರುಸಿನ ಮತಪ್ರಚಾರ ನಡೆಸಿದರು.


























