ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್‌ನಾದ್ಯಂತ ಮೊನ್ನೆಯಿಂದ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಮಂಗಳವಾರ ಸಂಜೆಯಿಂದ ಶುರುವಾದ ಜಿಟಿ ಜಿಟಿ ಮಳೆ ನೋಡನೋಡುತ್ತಿದ್ದಂತೆ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ರಣಭೀಕರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ನಿಧಾನಗತಿಯಲ್ಲಿ ನಗರಗಳಲ್ಲಿನ ಮುಖ್ಯ ರಸ್ತೆಗಳು, ಫುಟ್ ಪಾತ್ಗಳು, ದುಬೈನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಖ್ಯ ರಸ್ತೆಗಳು, ಮೆಟ್ರೋ ನಿಲ್ದಾಣ, ಬೃಹತ್ ಶಾಪಿಂಗ್ ಮಾಲ್ಗಳು ಅಕ್ಷರಶಃ ಕೆರೆಯಂತಾಗಿವೆ. ನಿಲ್ದಾಣದಲ್ಲೇ ನೀರು ತುಂಬಿಕೊಂಡಿದ್ದರಿಂದ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ದುಬೈನಲ್ಲಿನ ಪ್ರವಾಹದ ದೃಶ್ಯಗಳು ನೋಡುಗರಲ್ಲಿ ಅಚ್ಚರಿಯುಂಟು ಮಾಡುತ್ತಿದೆ. ಇನ್ನು ಈ ಭೀಕರ ಮಳೆಗೆ ಬೆಕ್ಕಿನ ಮರಿಯೊಂದು ಕಾರಿನ ಬಳಿ ನಿಂತುಕೊಂಡಿರೋ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಳೆಯ ನೀರಿನಲ್ಲಿ ಕಾರಿನ ಡೋರ್ ಬಳಿ ಬೆಕ್ಕು ನಿಂತುಕೊಂಡಿತ್ತು. ಇದನ್ನು ಗಮನಿಸಿದ ವ್ಯಕ್ತಿಯೂ ಕೂಡಲೇ ಬೋಟ್ನಲ್ಲಿ ತೆರಳಿ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ.
ಇತ್ತ ನಿಧಾನವಾಗಿ ಮುಖ್ಯ ರಸ್ತೆಗಳಿಗೆ ಮಳೆ ನೀರು ಬಂದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ನೀರು ಬರುತ್ತಿದ್ದಂತೆ ವಾಹನ ಸವಾರರು ಕೂಡಲೇ ಅಲ್ಲಿಂದ ಹೊರ ಬಂದು ಜೀವವನ್ನು ಉಳಿಸಿಕೊಂಡಿದ್ದಾರೆ. ಈ ದಿಢೀರ್ ಮಳೆಯಿಂದ ದುಬೈನ ನಿವಾಸಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ.