ಚಂಡೀಗಢ : ಪರಪುರುಷನ ಜೊತೆ ತನ್ನ ಪತ್ನಿ ಕಾರೊಳಗೆ ಕುಳಿತುಕೊಂಡು ಸರಸವಾಡುತ್ತಿದ್ದದ್ದನ್ನು ಕಂಡು ವ್ಯಕ್ತಿಯೊಬ್ಬ ಆಕೆಯನ್ನು ಮನಬಂದಂತೆ ಥಳಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ಪಂಚುಕಾದ ಪಾರ್ಕ್ ಒಂದರಲ್ಲಿ ಪತಿ ಬ್ಯಾಟಿನಿಂದ ತನ್ನ ಪತ್ನಿಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆಗಿದ್ದೇನು..?
ವ್ಯಕ್ತಿಯ ಪತ್ನಿಯು ಕಾರಿನಲ್ಲಿ ಪರಪುರುಷನ ಜೊತೆ ಕುಳಿತುಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ವ್ಯಕ್ತಿ ಕಾರಿನ ಬಳಿ ತೆರಳಿ ಮೊದಲು ಕಾರಿನ ಗ್ಲಾಸ್ ಒಡೆದು ಹಾಕಿದ್ದಾರೆ. ನಂತರ ಪತ್ನಿಯನ್ನು ಕಾರಿನಿಂದ ಎಳೆದು ಬ್ಯಾಟ್‌ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ.
ತನ್ನ ಮೇಲಿನ ಹಲ್ಲೆಯಿಂದ ಪಾರಾಗಲು ಮಹಿಳೆ ಜೋರಾಗಿ ಕೂಗಿಕೊಳ್ಳುತ್ತಾಳೆ. ಹೀಗಾಗಿ ಪಾರ್ಕ್ ನಲ್ಲಿದ್ದ ಮಂದಿ ಓಡೋಡಿ ಬಂದು ಹಲ್ಲೆಯನ್ನು ತಡೆಯುತ್ತಾರೆ. ಆದರೆ ಕಾರೊಳಗಡೆ ಇದ್ದ ವ್ಯಕ್ತಿ ಮಾತ್ರ ಮಹಿಳೆಯ ರಕ್ಷಣೆಗೆ ಬರಲಿಲ್ಲ. ಬದಲಾಗಿ ಗಲಾಟೆ ನೋಡಿಕೊಂಡೇ ಕಾರಿನಲ್ಲಿ ಕುಳಿತಿದ್ದನು.
ಈ ಎಲ್ಲಾ ದೃಶ್ಯಗಳನ್ನು ಪಾರ್ಕ್ ನಲ್ಲಿದ್ದ ಇತರ ಕೆಲ ವ್ಯಕ್ತಿಗಳು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವ್ಯಕ್ತಿಯು ನನಗೆ ಮೋಸ ಮಾಡುತ್ತಿದ್ದಿ ಎಂದು ಹೇಳುತ್ತಿರುವುದಾಗಿ ವರದಿಯಾಗಿದೆ.
ಸದ್ಯ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯ ವಿರುದ್ಧ ದೈಹಿಕ ಹಲ್ಲೆಯ ದೂರು ದಾಖಲಾಗಿದೆ. ಶೀಘ್ರವೇ ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.