ಬೆಂಗಳೂರು : ಕರ್ನಾಟಕ ಹಾಲು ಒಕ್ಕೂಟ ತನ್ನ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕುದುರಿಸಲು ಮಹತ್ವದ ಹೆಜ್ಜೆ ಇರಿಸಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಲಿದೆ. ಟೂರ್ನಿಯಲ್ಲಿ ಈ ತಂಡಗಳ ಆಟಗಾರರು ಪಂದ್ಯದ ವೇಳೆ ‘ನಂದಿನಿ’ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಿದ್ದಾರೆ.
ಈ ಸ್ಪಾನ್ಸರ್ಶಿಪ್ ಸಂಗತಿಯನ್ನು ಕೆಎಂಎಫ್ನ ನಿರ್ವಾಹಕ ನಿರ್ದೇಶಕ ಎಂಕೆ ಜಗದೀಶ್ ದೃಢಪಡಿಸಿದ್ದಾರೆ. ಸ್ಟಾಟ್ಲ್ಯಾಂಡ್ ಮತ್ತು ಐರ್ಲ್ಯಾಂಡ್ ತಂಡಗಳನ್ನು ಸ್ಪಾನ್ಸರ್ ಮಾಡುತ್ತಿದ್ದೇವೆ. ಆ ಆಟಗಾರರು ಪಂದ್ಯದ ವೇಳೆ ನಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಿದ್ದಾರೆ ಎಂದು ಜಗದೀಶ್ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆ ಮೇಲೆ ಕಣ್ಣಿಟ್ಟ ಕೆಎಂಎಫ್
ಭಾರತದಲ್ಲಿ ಅಮೂಲ್ ಹಾಗೂ ನೆರೆ ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಹಾಲು ಒಕ್ಕೂಟಗಳಿಂದ ಪೈಪೋಟಿ ಎದುರಿಸುತ್ತಿರುವ ಮತ್ತು ಉತ್ಪಾದನೆಗಿಂತ ಕಡಿಮೆ ಹಾಲು ಮಾರಾಟ ಕಾಣುತ್ತಿರುವ ಕೆಎಂಎಫ್ ಜಾಗತಿಕ ಮಾರುಕಟ್ಟೆ ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವಕಪ್ನಲ್ಲಿ ಎರಡು ತಂಡಗಳ ಪ್ರಾಯೋಜಕತ್ವ ವಹಿಸಿಕೊಂಡಿರುವುದು ಒಂದು ಮಹತ್ವದ ಹೆಜ್ಜೆಯಾಗಿದೆ.
ಮಧ್ಯಪ್ರಾಚ್ಯ ಭಾಗದಲ್ಲಿ ನಮ್ಮ ಮಳಿಗೆಗಳಿವೆ. ಸಿಂಗಾಪುರದಲ್ಲೂ ಇದೆ. ಅಮೆರಿಕದಲ್ಲಿ ನಮ್ಮ ಸಿಹಿತಿಂಡಿಗಳನ್ನು ಮಾರುತ್ತಿದ್ದೇವೆ, ಎಂದು ಕೆಎಂಎಫ್ನ ಸದ್ಯದ ಜಾಗತಿಕ ಮಾರುಕಟ್ಟೆ ಸ್ಥಿತಿಯ ಮಾಹಿತಿಯನ್ನು ಅದರ ಎಂಡಿ ಜಗದೀಶ್ ನೀಡಿದ್ದಾರೆ.
ಕೆಎಂಎಫ್ ನಡೆಗೆ ಮೋಹನ್ದಾಸ್ ಪೈ ಟೀಕೆ
ಸ್ಕಾಟ್ಲ್ಯಾಂಡ್ ಮತ್ತು ಐರ್ಲ್ಯಾಂಡ್ ತಂಡಗಳನ್ನು ಪ್ರಾಯೋಜಿಸುವ ಕೆಎಂಎಫ್ ಸಂಸ್ಥೆಯ ನಡೆಯನ್ನು ಮಾಜಿ ಇನ್ಫೋಸಿಸ್ ಸಿಎಫ್ಒ ಟಿ.ವಿ. ಮೋಹನದಾಸ್ ಪೈ ಕಟುವಾಗಿ ಟೀಕಿಸಿದ್ದಾರೆ.
ಕರ್ನಾಟಕ ರಣಜಿ ತಂಡ, ಕರ್ನಾಟಕದ ಕ್ರೀಡಾಪಟುಗಳು, ಕಲಾವಿದರಿಗೆ ಯಾಕೆ ಸ್ಪಾನ್ಸರ್ ಆಗಬಾರದು..!? ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿವೇತನ ಕೊಡಬಹದಿತ್ತಲ್ಲವಾ.!? ಕನ್ನಡಿಗರ ತೆರಿಗೆ ಹಣ, ಸಬ್ಸಿಡಿಯಿಂದ ಪಡೆದ ಹಣವನ್ನು ಕೆಎಂಎಫ್ ಸಂಸ್ಥೆ ಯಾರಿಗೂ ತಿಳಿಯದ ವಿದೇಶೀ ತಂಡಗಳ ಮೇಲೆ ವ್ಯಯಿಸುತ್ತಿದೆಯಲ್ಲ ಎಂದು ಎಕ್ಸ್ ಪೋಸ್ಟ್ನಲ್ಲಿ ಪೈ ಲೇವಡಿ ಮಾಡಿದ್ದಾರೆ.
ಮೋಹನದಾಸ್ ಪೈ ವಿರೋಧವನ್ನು ಕೆಎಂಎಫ್ ಎಂಡಿ ತಳ್ಳಿಹಾಕಿದ್ದಾರೆ. ಕೆಎಎಂಎಫ್ನ ಶೇ. 85ರಷ್ಟು ಆದಾಯವು ರೈತರಿಗೇ ಸಂದಾಯವಾಗುತ್ತದೆ. ತಮ್ಮ ಉತ್ಪನ್ನದ ಪ್ರಚಾರಕ್ಕಾಗಿ ವಿಶ್ವಕಪ್ನಲ್ಲಿ ಪ್ರಾಯೋಜಕರಾಗಲು ನಿರ್ಧರಿಸಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.

























