ಮಂಗಳೂರು : ಬಂಟ ಸಮಾಜದ ವತಿಯಿಂದ ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುವ ಷಡ್ಯಂತ್ರದ ಬಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಲಾಯಿತು.

ರಾಜಕೀಯ ರಹಿತವಾಗಿ ಬಂಟ ಸಮಾಜದವರು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ ಸಮಾಜದಲ್ಲಿ ಅಸ್ತಿತ್ವವೇ ಇಲ್ಲದ ಸಂಘಟನೆಯ ಹೆಸರಿನಲ್ಲಿ ಜಾತಿ-ಜಾತಿ ಮಧ್ಯೆ ದ್ವೇಷ, ವೈಷಮ್ಯ ಹುಟ್ಟಿಸುವ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿರುವ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಕೆಟ್ಟ ಕೆಲಸ ಮಾಡಿದವರಿಗೆ ಸದ್ಭುದ್ಧಿಯನ್ನು ಕರುಣಿಸಲಿ ಎಂದು ಶ್ರೀ ದೇವಿಯಲ್ಲಿ ಅರಿಕೆ ಮಾಡಿಕೊಂಡರು.

ಬಂಟ ಸಮಾಜ ಯಾವತ್ತೂ ಜಾತಿ, ಪಕ್ಷದ ಹಿಂದೆ ಹೋದ ಸಮಾಜವಲ್ಲ, ಸಮಾಜದ ಎಲ್ಲ ವರ್ಗದ, ಜಾತಿಯ ಜನರನ್ನು ಸೇರಿಸಿಕೊಂಡು ಸಾಮರಸ್ಯ ಸಹಬಾಳ್ವೆ, ಸಹೋದರತ್ವದ ಜೀವನವನ್ನು ಸಾಗಿಸುವುದರ ಜೊತೆಗೆ, ದೈವಾರಾಧನೆ ಧಾರ್ಮಿಕ, ಉದ್ಯಮ ಇನ್ನಿತರ ಸಾಮಾಜಿಕ ಕ್ಷೇತ್ರದಲ್ಲಿ ಬಂಟ, ಬಿಲ್ಲವ ಎನ್ನದೆ ಎಲ್ಲಾ ಸಮುದಾಯದವರು ಒಟ್ಟಾಗಿ ಒಂದೇ ಕುಟುಂಬದಂತೆ ಸತ್ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ಪ್ರಜಾಪ್ರಭುತ್ವದಲ್ಲಿ ಅವರವರ ಆಯ್ಕೆಯ ಅಭ್ಯರ್ಥಿಗಳನ್ನು ಅವರವರ ಪಕ್ಷ, ವ್ಯಕ್ತಿತ್ವ, ಸಿದ್ಧಾಂತ ನೋಡಿ ಆರಿಸುವುದು ಅವರವರ ವೈಯಕ್ತಿಕ ಸ್ವತಂತ್ರ ಮತ್ತು ಹಕ್ಕು. ಆದರೆ ಈ ಹಿನ್ನಲೆಯಲ್ಲಿ ಜಾತಿ-ಜಾತಿ ಮಧ್ಯೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುವ ಕಾಣದ ಕೈ ಗಳಿಗೆ ದೇವರು ಸದ್ಬುದ್ಧಿಯನ್ನು ಕರುಣಿಸಬೇಕು ಹಾಗೂ ಯಾವುದೇ ಸಮುದಾಯದವರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು, ಚುನಾವಣೆಯ ನಂತರದಲ್ಲಿ ಕೂಡ ಎಲ್ಲರು ಈ ಸಮಾಜದಲ್ಲಿ ಒಟ್ಟಾಗಿ ಪ್ರೀತಿ ವಿಶ್ವಾಸದಿಂದ ಸ್ನೇಹಪೂರ್ವಕ ಜೀವನವನ್ನು ನಡೆಸುವಂತಾಗಬೇಕು ಸಾಮಾಜಿಕ ಜಾಲತಾಣದಲ್ಲಿ ಇಂತಹ ದ್ವೇಷ ಬಿತ್ತುವ ಲೇಖನವನ್ನು ಬರೆದವರು ಯಾರು ಎಂದು ಸಮಾಜಕ್ಕೆ ತೋರಿಸಿಕೊಡಬೇಕು ಎಂದು ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.



























